

ಹೊಸಕೋಟೆ: ಸರ್ಕಾರಿ ಶಾಲಾ ಕಾಲೇಜುಗಳು ಯಾವುದೇ ಖಾಸಗಿ ಶಾಲಾಕಾಲೇಜುಗಳಿಂತ ಕಡಿಮೆ ಇಲ್ಲ. ಉತ್ತಮ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ, ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳ ಹಾಜರಾತಿ ಮುಖ್ಯ ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ನಗರಸಭೆ ವ್ಯಾಪ್ತಿಯ 28ನೇ ವಾರ್ಡ್‌ನಲ್ಲಿ ಸೋಮವಾರ ಕೊಳವೆಬಾವಿ ಕೊರೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಕಾಲೇಜಿನಲ್ಲಿ ನೀರಿನ ಸಮಸ್ಯೆ ಇರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಕೊಳವೆಬಾವಿ ಕೊರೆಸಲಾಗಿದೆ, ಕಾಲೇಜಿನಲ್ಲಿ ಎಲ್ಲ ಸೌಕರ್ಯಗಳು ಉತ್ತಮವಾಗಿವೆ. ಆದ್ದರಿಂದ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಭವಿಷ್ಯದಲ್ಲಿ ಉನ್ನತ ಹುದ್ದೆ ಅಲಂಕರಿಸಬೇಕು ಎಂದು ಸಲಹೆ ನೀಡಿದರು.
ಪ್ರವೇಶಪತ್ರ ಕೊಡಲ್ಲ: ಕೆಲವು ವಿದ್ಯಾರ್ಥಿಗಳು ಕಾಟಾಚಾರಕ್ಕೆ ಎಂಬಂತೆ ವಾರದಲ್ಲಿ ಎರಡು ದಿನ ಕಾಲೇಜಿನತ್ತ ಮುಖಮಾಡುತ್ತಾರೆ ಎಂಬ ಮಾಹಿತಿ ಬಂದಿದೆ. ಇದು ಸರಿಯಲ್ಲ, ಇದರಿಂದ ಗುಣಮಟ್ಟದ ಶಿಕ್ಷಣ ಪಡೆಯುವುದು ಅಸಾಧ್ಯ. ವಿದ್ಯಾರ್ಥಿ ದಿಸೆಯಲ್ಲಿ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯಧೋರಣೆ ಅನುಸರಿಸಿದರೆ ಭವಿಷ್ಯವೇ ಕತ್ತಲಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕಡ್ಡಾಯವಾಗಿ ತರಗತಿಗಳಿಗೆ ಹಾಜರಾಗಬೇಕು. ಶೇ.75ಕ್ಕಿಂತ ಹೆಚ್ಚು ಹಾಜರಾತಿ ಇದ್ದರಷ್ಟೇ ಪರೀಕ್ಷೆಗೆ ಪ್ರವೇಶ ಪತ್ರ ನೀಡಬೇಕು ಎಂದು ಸೂಚಿಸಿದ್ದೇನೆ ಎಂದು ಸಚಿವರು ತಿಳಿಸಿದರು. ಹೇಗೋ ಪ್ರವೇಶಪತ್ರ ಕೊಡುತ್ತಾರೆ ಎಂಬ ಧೋರಣೆ ಬೇಡ. ಇದರಿಂದ ಕಾಲೇಜಿನ ಲಿತಾಂಶದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದರು.
ಸಾರ್ವಜನಿಕರಿಗೂ ನೀರು: ಇಲ್ಲಿನ ಕಾಲೇಜು ಹಾಗೂ ವಾರ್ಡ್ ಸಾರ್ವಜನಿಕರಿಗೂ ಅನುಕೂಲವಾಗುವಂತೆ ಪೈಪ್‌ಲೈನ್ ಅಳವಡಿಸಿ ನೀರು ಪೂರೈಸುವಂತೆ ಸಂಬಂಧಪಟ್ಟವರಿಗೆ ಸಚಿವರು ಸೂಚಿಸಿದರು.
ವೇತನ ಹೆಚ್ಚಳಕ್ಕೆ ಪ್ರಯತ್ನ:
ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ವೇತನ ಕಡಿಮೆ ಇದೆ ಎಂಬ ಮಾಹಿತಿ ಇದೆ. ಈ ಬಗ್ಗೆ ಸಚಿವರು ಹಾಗೂ ಸರ್ಕಾರದ ಗಮನ ಸೆಳೆದು ವೇತನ ಹೆಚ್ಚಳಕ್ಕೆ ಪ್ರಯತ್ನಿಸಲಾಗುವುದು. ಹಾಗೇಯೇ ಉಪನ್ಯಾಸಕರ ನೇಮಕ ಕುರಿತಂತೆ ಶಿಕ್ಷಣ ಇಲಾಖೆ ಸಚಿವರೊಂದಿಗೆ ಮಾತನಾಡಲಾಗುವುದು ಎಂಟಿಬಿ ಭರವಸೆ ನೀಡಿದರು.
ಬಸ್ ನಿಲ್ಲಿಸಲ್ಲ: ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಸಂವಾದ ನಡೆಸಿದ ಸಚಿವರು, ಉತ್ತಮ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು. ಈ ವೇಳೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳು ಕಾಲೇಜು ಬಳಿ ನಿಲುಗಡೆ ಕೊಡಲ್ಲ, ಗ್ರಾಮಗಳಿಂದ ಬಂದು ರಸ್ತೆಯಲ್ಲಿ ಕಾಯುತ್ತಿದ್ದರೂ ನಿಲ್ಲಿಸುವುದಿಲ್ಲ. ಇದರಿಂದ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಲವತ್ತುಗೊಂಡರು. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಸಾರಿಗೆ ಸಂಸ್ಥೆ ಮುಖ್ಯಸ್ಥರೊಂದಿಗೆ ಮಾತನಾಡಿ ಬಸ್ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಮಕ್ಕಳಿಂದ ಹುಟ್ಟುಹಬ್ಬ ಶುಭಾಶಯ: ಕೆಲಕಾಲ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಸಚಿವರು ಸಂತಸ ಹಂಚಿಕೊಂಡರು. ಬುಧವಾರ ಸಚಿವರ ಹುಟ್ಟುಹಬ್ಬವಿರುವುದರಿಂದ ಮುಚ್ಚಿತವಾಗಿಯೇ ವಿದ್ಯಾರ್ಥಿಗಳು ಹುಟ್ಟುಹಬ್ಬದ ಶುಭಾಶಯಕೋರಿದರು.