ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿ ಇಲ್ಲ, ಸಚಿವ ಎಂಟಿಬಿ ನಾಗರಾಜ್ ತಾಕೀತು

1aa97614-7fca-421c-a98b-72e60049113a
Published on


ವಿಜಯವಾಣಿ ಸುದ್ದಿಜಾಲ ಜಡಿಗೇನಹಳ್ಳಿ
ಹೊಸಕೋಟೆ ತಾಲೂಕಿನಲ್ಲಿ ಪ್ರತಿ ಹೋಬಳಿಯಲ್ಲೂ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಚುರುಕುಪಡೆದಿವೆ. ಅಧಿಕಾರಿಗಳು ಕಾಮಗಾರಿ ನಡೆಯುವ ವೇಳೆ ಸ್ಥಳ ಪರಿಶೀಲನೆ ನಡೆಸಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಈ ವಿಷಯದಲ್ಲಿ ರಾಜಿಯಾದರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.


ಜಡಿಗೇನಹಳ್ಳಿ ಹೋಬಳಿ ವಾಗಟ ಪಂಚಾಯಿತಿಯ ಕೋಡಿಹಳ್ಳಿ ಗ್ರಾಮದಲ್ಲಿ ಮಂಗಳವಾರ 30-54 ವಿಶೇಷ ಅನುದಾನದಡಿ 20 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ದೀರ್ಘ ಬಾಳಿಕೆ ದೃಷ್ಟಿಯಿಂದ ಇತ್ತೀಚಿನ ದಿನಗಳಲ್ಲಿ ರಸ್ತೆಗಳಿಗೆ ಕಾಂಕ್ರೀಟ್ ಕಾಮಗಾರಿ ಹೆಚ್ಚಿಸಲಾಗಿದೆ. ಒಂದು ಬಾರಿ ರಸ್ತೆ ಅಭಿವೃದ್ಧಿಯಾದರೆ ಅದು ದೀರ್ಘಕಾಲ ಬಾಳಿಕೆ ಬರಬೇಕು. ಈ ಉದ್ದೇಶ ಲಿಸಬೇಕಾದರೆ ಅಧಿಕಾರಿಗಳು ನಿಗಾ ವಹಿಸಬೇಕು, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಸೂಚಿಸಿದರು.


ಸರ್ಕಾರದ ವಿಶೇಷ ಅನುದಾನ: ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆಗೊಳಿಸುವ ಮೂಲಕ ಸಚಿವರು ತಾಲೂಕಿನ ಹಲವು ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಇದರಿಂದ ಗ್ರಾಮದ ಚಿತ್ರಣವೇ ಬದಲಾಗುತ್ತಿದೆ. ರಸ್ತೆಗಳ ಅಭಿವೃದ್ಧಿಯಿಂದ ಗ್ರಾಮಗಳಲ್ಲಿ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೂ ಸಹಕಾರಿಯಾಗುತ್ತದೆ ಎಂದು ಜಿಪಂ ಮಾಜಿ ಸದಸ್ಯ ಚನ್ನಸಂದ್ರ ನಾಗರಾಜ್ ಹೇಳಿದರು.

ಆರತಿ ಬೆಳಗಿ ಸ್ವಾಗತ: ಜಡಿಗೇನಹಳ್ಳಿ ಹೋಬಳಿಯ ಕೋಡಿಹಳ್ಳಿ, ಕಾಚರಕನಹಳ್ಳಿ, ದೇವಿಶೆಟ್ಟಿಹಳ್ಳಿಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ ಸಚಿವರನ್ನು ಗ್ರಾಮದ ಮಹಿಳೆಯರು ಆರತಿ ಬೆಳಗಿ ಸ್ವಾಗತ ಕೋರಿದರು. ತಮಟೆ, ವಾದ್ಯಗಳೊಂದಿಗೆ ಮುಖಂಡರನ್ನು ಬರಮಾಡಿಕೊಂಡ ಗ್ರಾಮಸ್ಥರು ಗ್ರಾಮಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳ ಬಗ್ಗೆ ಬೇಡಿಕೆ ಇಟ್ಟರು.


ಗೋಮಾತೆಗೆ ಬಾಳೆಹಣ್ಣು: ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ವೇಳೆ ಗ್ರಾಮೀಣ ಪ್ರದೇಶದ ಸಂಪ್ರದಾಯದಂತೆ ಗೋವುಗಳಿಗೆ ಪೂಜೆ ಸಲ್ಲಿಸಲಾಯತು. ಈ ವೇಳೆ ಸಚಿವರು ಗೋವುಗಳಿಗೆ ಬಾಳೆ ಹಣ್ಣು ಅರ್ಪಿಸಿದ ಬಳಿಕ ಭೂಮಿ ಪೂಜೆಗೆ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net