

ವಿಜಯವಾಣಿ ಸುದ್ದಿಜಾಲ ಜಡಿಗೇನಹಳ್ಳಿ
ಸರ್ಕಾರಿ ಗುಂಡುತೋಪು, ಗೋಮಾಳ, ಖರಾಬು ಭೂಮಿಗಳಲ್ಲಿ ಬಡವರು ಬಹಳ ವರ್ಷದ ಹಿಂದೆಯೇ ನಿರ್ಮಿಸಿಕೊಂಡಿರುವ ಮನೆಗಳನ್ನು ಯಾವುದೇ ಕಾರಣಕ್ಕೂ ಒಡೆಯುವುದಿಲ್ಲ. ಈ ಬಗ್ಗೆ ಆತಂಕ ಬೇಡ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಹೊಸಕೋಟೆ ತಾಲೂಕು ಅನುಗೊಂಡನಹಳ್ಳಿ ಹೋಬಳಿ ಮುತ್ಕೂರು ಗ್ರಾಮದಲ್ಲಿ ಗುರುವಾರ 50-54 ವಿಶೇಷ ಅನುದಾನದಡಿ 20 ಲಕ್ಷ ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಸರ್ಕಾರಿ ಭೂಮಿಗಳಲ್ಲಿ ಬಹಳ ವರ್ಷದ ಹಿಂದೆ ಮನೆ ನಿರ್ಮಾಣ ಮಾಡಿಕೊಂಡಿರುವ ಬಡವರಿಗೆ ಹಕ್ಕುಪತ್ರ ವಿತರಿಸಿ ಸಕ್ರಮ ಮಾಡುವ ನಿಟ್ಟಿನಲ್ಲಿ ಸರ್ಕಾರದಮಟ್ಟದಲ್ಲಿ ಚರ್ಚೆ ನಡೆದಿದೆ. ಈಗಾಗಲೇ ಸಚಿವ ಸಂಪುಟದಲ್ಲಿ ಎರಡು ಬಾರಿ ಈ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದಿಂದ ಹಕ್ಕುಪತ್ರ ವಿತರಿಸುವ ಸಂಬಂಧ ಆದೇಶ ಬರುವ ನಿರೀಕ್ಷೆ ಇದೆ ಎಂದು ಅಭಯ ನೀಡಿದರು.
ವದಂತಿಗಳಿಗೆ ಕಿವಿಗೊಡಬೇಡಿ: ಕೆಲವರು ಬೇಕಂತಲೇ ವದಂತಿ ಹರಿಬಿಡುತ್ತಾರೆ. ಸರ್ಕಾರ ಮನೆಗಳನ್ನು ಒಡೆಯಲು ಆದೇಶಿಸಿದೆ ಎಂಬ ಹೆದರಿಕೆ ಹುಟ್ಟುಹಾಕುತ್ತಾರೆ. ಇದಕ್ಕೆಲ್ಲ ಕಿವಿಗೊಡಬೇಡಿ, ಸರ್ಕಾರಗಳು ಬಡವರ ಮನೆಗಳನ್ನು ಒಡೆಯಲು ಮುಂದಾಗುವುದಿಲ್ಲ. ಈ ಬಗ್ಗೆ ಕೆಲವು ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳಿದ್ದು, ಅವುಗಳ ಬಗ್ಗೆ ಸಾಧಕ-ಬಾಧಕಗಳ ಪರಿಶೀಲನೆ ನಡೆಯುತ್ತಿದೆ. ಬಡಜನತೆಯ ಹಿತದೃಷ್ಟಿ ಹಾಗೂ ಮಾನವೀಯ ನೆಲೆಗಟ್ಟಿನ ಮೇಲೆ ಸರ್ಕಾರಗಳು ಕಾರ್ಯಕ್ರಮ ರೂಪಿಸಲಿದೆ ಎಂದರು.
ಒತ್ತುವರಿಗೆ ಅವಕಾಶವಿಲ್ಲ: ಮಳೆ ನೀರು ಸರಾಗವಾಗಿ ಹರಿಯಲು ತೊಂದರೆ ಮಾಡಿ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿದ್ದರೆ ಅಂಥ ವಿಷಯದಲ್ಲಿ ರಾಜಿ ಸಾಧ್ಯವಿಲ್ಲ. ಯಾವುದೇ ಪ್ರಭಾವ ಬಳಸಿದರೂ ಅಂಥ ಒತ್ತುವರಿಯನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.
3 ಗ್ರಾಮಗಳಲ್ಲಿ ಪೂಜೆ: ಅನುಗೊಂಡನಹಳ್ಳಿ ಹೋಬಳಿಯ ಮುತ್ಕೂರು, ಮೇಡಿಮಲ್ಲಸಂದ್ರ, ಅನುಗೊಂಡನಹಳ್ಳಿ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಕೆಲವು ಕಡೆ ಹಕ್ಕುಪತ್ರ ನೀಡಿದ್ದಾರೆ: ಗ್ರಾಮದ ಸರ್ಕಾರಿ ಗುಂಡುತೋಪು, ಗೋಮಾಳದ ಕೆಲವು ಕಡೆ ಮನೆ ನಿರ್ಮಾಣ ಮಾಡಿಕೊಂಡಿರುವವರಿಗೆ ಇತ್ತೀಚಿಗೆ ಹಕ್ಕುಪತ್ರ ನೀಡಲಾಗಿದೆ. ಆದರೆ ಇನ್ನು ಕೆಲವು ಕಡೆಗಳಲ್ಲಿ ನೀಡಿಲ್ಲ, ಇದರ ನಡುವೆ ಇಂಥ ಮನೆಗಳನ್ನು ತೆರವುಗೊಳಿಸಲಾಗುತ್ತದೆ ಎಂದು ಕೆಲವರು ಹೇಳಿಕೊಂಡು ಓಡಾಡುತ್ತಿದ್ದಾರೆ. ಬಡವರಾದ ನಾವು ಮನೆ ಕಳೆದುಕೊಂಡು ಹೋಗುವುದಾದರೂ ಎಲ್ಲಿಗೆ ಎಂದು ಸ್ಥಳೀಯರು ಅಲವತ್ತುಗೊಂಡರು. ಇಂಥ ಮನೆಗಳ ಸಂಬಂಧ ಜಿಲ್ಲಾಡಳಿತದಿಂದ ಸರ್ವೇ ಕಾರ್ಯ ನಡೆಯುತ್ತಿದ್ದು, ಸರ್ಕಾರಕ್ಕೆ ವರದಿ ನೀಡಲಾಗುತ್ತಿದೆ, ಹಂತಹಂತವಾಗಿ ಹಕ್ಕುಪತ್ರ ವಿತರಣೆಯಾಗಲಿದೆ ಇಂಥ ಯಾವುದೇ ಸುಳ್ಳು ಸುದ್ದಿಗಳಿಗೆ ಹೆದರಬಾರದು ಎಂದು ಸಚಿವರು ಅಭಯ ನೀಡಿದರು.