

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸರಳ ಸಜ್ಜನಿಕೆಯ ರಾಜಕಾರಣಿ, ನಿಷ್ಪಕ್ಷಪಾತ ಜನಪ್ರತಿನಿಧಿಯಾಗಿ ಜನಸೇವೆಯಲ್ಲಿ ತೊಡಗಿರುವ ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಅವರಿಗೆ ಭಗವಂತ ಮತ್ತಷ್ಟು ಆರೋಗ್ಯ ಹಾಗೂ ಆಯಸ್ಸು ನೀಡಲಿ. ಈ ಮೂಲಕ ಅವರಿಂದ ಮತ್ತಷ್ಟು ಜನಸೇವೆ ಸಿಗುವಂತಾಗಲಿ ಎಂದು ಹೊಸಕೋಟೆ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಕೆ.ಸತೀಶ್ ಆಶಿಸಿದರು.
ಹೊಸಕೋಟೆ ಹೊರವಲಯ ಗರುಡಾಚಾರ್ ಪಾಳ್ಯದ ಮಾಜಿ ಸಚಿವರ ಗೃಹ ಕಚೇರಿ ಬಳಿ ಭಾನುವಾರ ಹಮ್ಮಿಕೊಂಡಿದ್ದ ಎಂಟಿಬಿ ಅವರ 76ನೇ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಮಾತನಾಡಿದರು.
ಹೊಸಕೋಟೆ ಶಾಸಕರಾಗಿ ರಾಜ್ಯದ ಮಂತ್ರಿಯಾಗಿ ಅವರ ಅಧಿಕಾರವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ. ಅವರ ಅಭಿವೃದ್ಧಿ ಕಾರ್ಯಗಳನ್ನು ಹೊಸಕೋಟೆ ಜನರು ಎಂದಿಗೂ ಮರೆಯುವುದಿಲ್ಲ ಎಂದರು.
ಅವರು ಎಷ್ಟೆ ದೊಡ್ಡ ಅಧಿಕಾರದಲ್ಲಿದ್ದರೂ ಸಾರ್ವಜನಿಕ ವಲಯದಲ್ಲಿ ಸರಳ ಜೀವಿಯಾಗಿ ಬದುಕುತ್ತಿರುವುದು ಎಲ್ಲರಿಗೂ ಆದರ್ಶವಾಗಿದೆ. ಮುಂದಿನ ದಿನಗಳಲ್ಲೂ ಕ್ಷೇತ್ರದ ಜನರ ಒಳಿತಿಗಾಗಿ ದುಡಿಯಲಿದ್ದಾರೆ. ಅವರಿಗೆ ಭಗವಂತನ ಕೃಪೆ ಹಾಗೂ ಜನರ ಆಶೀರ್ವಾದ ಸದಾ ಇರಲಿದೆ ಎಂದು ಹೇಳಿದರು.
ಹರಿದು ಬಂದ ಜನಸಾಗರ: ಗರುಡಾಚಾರ್ ಪಾಳ್ಯದಲ್ಲಿ ಮಾಜಿ ಸಚಿವರ ಮನೆಯಂಗಳಕ್ಕೆ ಜನಸಾಗರವೇ ಹರಿದು ಬಂದಿತ್ತು. ಹೂಮಾಲೆ ಹಾಕಿ ಹೂಗುಚ್ಛ ನೀಡಿ ಜನರು ಶುಭಾಶಯ ಕೋರಿದರು. ವಿಶೇಷವಾಗಿ ತಯಾರಿಸಿದ್ದ ಬೃಹತ್ ಗಾತ್ರದ ಕೇಕ್ ಕತ್ತರಿಸುವ ಮೂಲಕ ಎಂಟಿಬಿ ನಾಗರಾಜ್ ಜನ್ಮದಿನ ಆಚರಿಸಿಕೊಂಡರು.