ಕೆಎಸ್‌ಆರ್‌ಟಿಸಿ ಆದಾಯಕ್ಕೆ ‘ಮಹಾ’ ರಿಯಾಯಿತಿ ಕೊಕ್ಕೆ !

1685515341163_16BGV-RAVIG2.webp
Published on

ರವಿ ಗೋಸಾವಿ ಬೆಳಗಾವಿ
 ಕಾಂಗ್ರೆಸ್‌ನ ಉಚಿತ ಗ್ಯಾರಂಟಿಗಳು ಸಾರ್ವಜನಿಕ ವಲಯದಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೆ, ಎರಡು ತಿಂಗಳಿನಿಂದ ಮಹಾರಾಷ್ಟ್ರ ಸರ್ಕಾರ ಮಹಿಳಾ ಪ್ರಯಾಣಿಕರಿಗೆ ನೀಡಿರುವ ರಿಯಾಯಿತಿಯೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಪೆಟ್ಟು ನೀಡುತ್ತಿದೆ. ಪರಿಣಾಮ ಏಕಾಏಕಿ ಆದಾಯ ಕುಸಿತದಿಂದ ಎನ್‌ಡಬ್ಲೂೃಕೆಎಸ್‌ಆರ್‌ಟಿಸಿ ನಲುಗುತ್ತಿದೆ.

ಮಹಾರಾಷ್ಟ್ರ ಸರ್ಕಾರ ಮಾ.17ರಿಂದ ‘ಮಹಿಳಾ ಸನ್ಮಾನ ಯೋಜನೆ’ ಯೋಜನೆಯಡಿ ಎಂಎಸ್‌ಆರ್‌ಟಿಸಿ ಬಸ್‌ಗಳ ಎಲ್ಲಾ ವರ್ಗಗಳಲ್ಲಿ 5ರಿಂದ 75 ವರ್ಷದ ವರೆಗಿನ ಮಹಿಳಾ ಪ್ರಯಾಣಿಕರಿಗೆ ಟಿಕೆಟ್ ದರದಲ್ಲಿ ಶೇ.50ರಷ್ಟು ರಿಯಾಯಿತಿ ಘೋಷಿಸಲಾಗಿದೆ. 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣ ಒದಗಿಸುತ್ತಿದ್ದು, ಆದರೆ, ಕರ್ನಾಟಕದಲ್ಲಿ ಸಂಚರಿಸುವ ಎಂಎಸ್‌ಆರ್‌ಟಿಸಿಯ ಅದೇ ಬಸ್‌ಗಳಲ್ಲಿ ಪೂರ್ಣ ಪ್ರಮಾಣದ ಶುಲ್ಕವನ್ನೇ ಪಡೆಯಲಾಗುತ್ತಿದೆ.

‘ಪ್ರಯಾಣದ ಡಿಸ್ಕೌಂಟ್‌ನಲ್ಲಿಯೂ ಗಡಿ ತಂಟೆಯ ಇರಾದೆ ಕಾಣುತ್ತಿದ್ದು, ಗಡಿ ಭಾಗದಲ್ಲಿ ಕರ್ನಾಟಕದ ಗ್ರಾಮೀಣರ ಮೇಲೆ ಈ ರಿಯಾಯಿತಿಯ ಪರಿಣಾಮ ಬೀರಿ, ಮಹಾ ಸರ್ಕಾರದ ಪರ ಒಲವು ಮೂಡಿಸಲು ಇದನ್ನು ಮಾಡುತ್ತಿದೆ’ ಎಂದು ಕನ್ನಡಿಗರಿಂದ ಅಸಮಧಾನ ಕೇಳಿಬರುತ್ತಿದೆ. ‘ಮಹಾರಾಷ್ಟ್ರದ ಬಸ್‌ಗಳ ಗುಣಮಟ್ಟ ಹೇಳಿಕೊಳ್ಳುವಂತಿಲ್ಲ. ಕರ್ನಾಟಕದ ಬಸ್ ಸೇವೆ ಅತ್ಯುತ್ತಮವಾಗಿದೆ ರಿಯಾಯಿತಿ ಇಲ್ಲವಾದರೂ ಕೆಎಸ್‌ಆರ್‌ಟಿಸಿಯೇ ನಮ್ಮ ಆಯ್ಕೆ’ ಎಂದು ಅಭಿಮಾನದ ಜತೆಗೆ ‘ಗುಜರಿಗೆ ಹೋಗುವ ಬಿಎಂಟಿಸಿಯ ಹಳೇ ಬಸ್‌ಗಳನ್ನು ಗಡಿ ಭಾಗದ ಡಿಪೋಗಳಲ್ಲಿ ಬಳಸುತ್ತಿರುವುದು ಪ್ರಯಾಣಿಕರು ವಿಮುಖರಾಗಲು ಕಾರಣ’ ಎಂಬ ಬೇಸರವೂ ವ್ಯಕ್ತವಾಗುತ್ತಿದೆ.  
 

ಎಂಎಸ್‌ಆರ್‌ಟಿಸಿಯ ನೂತನ ಯೋಜನೆ ಜಾರಿಗೊಂಡಾಗ ಆರಂಭದಲ್ಲಿ ಯಾವುದೇ ವ್ಯತ್ಯಾಸ ತಂಡುಬಂದಿರಲಿಲ್ಲ. ಆದರೆ, ಕಳೆದ 45 ದಿನಗಳಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಆದಾಯ ಗಣನೀಯವಾಗಿ ಕುಸಿಯುತ್ತಿದೆ. ಪ್ರತಿದಿನವೂ ಮಹಿಳೆರಿಗೆ ಅರ್ಧ ಬೆಲೆಯಲ್ಲಿ ಪ್ರಯಾಣ ಮಾಡುತ್ತಿರುವುದರಿಂದ ಮಹಾರಾಷ್ಟ್ರಕ್ಕೆ ಸೇವೆ ಒದಗಿಸುವ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ನೂರಾರು ಬಸ್‌ಗಳಲ್ಲಿ ಮಹಿಳೆಯರ ಸಮೇತ ಸಂಚರಿಸುವ ಕೌಟುಂಬಿಕ ಪ್ರಯಾಣ ಅಪರೂಪವಾಗಿದೆ ಎಂದು ಎನ್‌ಡಬ್ಲುಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಪ್ರವಾಸವೂ ಹೆಚ್ಚು!
ಈ ಕುರಿತು ಎಂಎಸ್‌ಆರ್‌ಟಿಸಿಯ ನಿರ್ವಾಹಕರನ್ನು ಮಾತನಾಡಿಸಿದಾಗ, ‘ಕರ್ನಾಟಕದಲ್ಲಿ ಸಂಚರಿಸುವ ಮಹಾರಾಷ್ಟ್ರ ಬಸ್‌ಗಳಿಗೆ ಕರ್ನಾಟಕ ದರವನ್ನು ವಿಧಿಸಲಾಗುತ್ತದೆ. ಮಹಾರಾಷ್ಟ್ರದ ಗಡಿ ಪ್ರದೇಶದೊಳಗಿನ ಪ್ರಯಾಣಕ್ಕಷ್ಟೇ ಅರ್ಧ ಶುಲ್ಕ ಪಡೆಯಲಾಗುತ್ತಿದೆ. ಮಹಿಳೆಯರ ಟಿಕೆಟ್ ದರ ಉಳಿಯುತ್ತದೆ ಎಂದು ಇಡೀ ಕುಟುಂಬವೂ ಪ್ರಯಾಣಿಸುತ್ತದೆ. ಇದರಿಂದ ಮಹಾರಾಷ್ಟ್ರದಲ್ಲಿ ದೇವಸ್ಥಾನಗಳು ಹಾಗೂ ಪ್ರವಾಸಿತಾಣಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದೆ’ ಎಂದರು.

ಮಹಾರಾಷ್ಟ್ರದಲ್ಲಿ ಬೆಳಗಾವಿ ವಿಭಾಗ ಒಂದರಿಂದಲೇ ಪ್ರತಿ ದಿನ 25 ಸಾವಿರ ಕಿಲೋ ಮೀಟರ್ ಸಂಚಾರ ನಿರ್ವಹಿಸುತ್ತೇವೆ. ಮಹಾರಾಷ್ಟ್ರ ಸರ್ಕಾರದ ಯೋಜನೆಯಿಂದಾಗಿ ನಮಗೆ ಪ್ರತಿ ದಿನ ಕಿ.ಲೋ ಮೀಟರ್‌ಗೆ 4-5 ರೂ.ನಷ್ಟವಾಗುತ್ತಿದ್ದು, ದಿನವೂ ಲಕ್ಷ ರೂ.ಆದಾಯ ಕುಸಿತಗೊಂಡಿದೆ. ಗಣೇಶ ರಾಠೋಡ, ವಿಭಾಗೀಯ ನಿಯಂತ್ರಣಾಧಿಕಾರಿ, ಎನ್‌ಡಬ್ಲೂಕೆಆರ್‌ಟಿಸಿ ಬೆಳಗಾವಿ

ಗಣೇಶ ರಾಠೋಡ, ವಿಭಾಗೀಯ ನಿಯಂತ್ರಣಾಧಿಕಾರಿ, ಎನ್‌ಡಬ್ಲೂಕೆಆರ್‌ಟಿಸಿ ಬೆಳಗಾವಿ



ರಾಜ್ಯದ ಯೋಜನೆಯೂ ಆದಾಯ ಹೆಚ್ಚಿಸಲ್ಲ !
ನೆರೆ ರಾಜ್ಯದ 50% ಡಿಸ್ಕೌಂಟ್ ಯೋಜನೆಯಿಂದಲೇ ದಿಡೀರ್ ಕುಸಿದಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆದಾಯಕ್ಕೆ ಇದೀಗ ಮತ್ತೆ ಹೊಸ ಗ್ಯಾರಂಟಿಯ ಭಯ ಎದುರಾಗಿದೆ. ಅಧಿಕಾರಿಗಳ ಪ್ರಕಾರ, ಬೆಳಗಾವಿ ವಿಭಾಗವು 68 ಮತ್ತು ಚಿಕೋಡಿ ವಿಭಾಗವು ಮಹಾರಾಷ್ಟ್ರಕ್ಕೆ ಪ್ರತಿದಿನ 153 ಬಸ್‌ಗಳನ್ನು ನಿರ್ವಹಿಸುತ್ತದೆ. ಪ್ರತಿ ದಿನ 900 ಕ್ಕೂ ಹೆಚ್ಚು ಎನ್‌ಡಬ್ಲೂಕೆಎಸ್‌ಆರ್‌ಟಿಸಿ ಬಸ್‌ಗಳು ಮಹಾರಾಷ್ಟ್ರಕ್ಕೆ ಪ್ರಯಾಣಿಸುತ್ತವೆ. ಮಹಾರಾಷ್ಟ್ರ ಮಹಿಳಾ ಸನ್ಮಾನ ಯೋಜನೆಯಿಂದಾಗಿ ತಿಂಗಳಿನಿಂದ ಆದಾಯದಲ್ಲಿ ಕುಸಿತ ಕಂಡಿರುವುದು ನಿಜ. ಆದರೆ, ಎಷ್ಟು ನಷ್ಟವಾಗಿದೆ ಎನ್ನುವುದನ್ನು ಇನ್ನೂ ವಿಶ್ಲೇಷಿಸಿಲ್ಲ ಎಂದರು.
ಬೆಳಗಾವಿ, ಚಿಕ್ಕೋಡಿ, ನಿಪ್ಪಾಣಿ, ಅಥಣಿ, ಕಾಗವಾಡ, ವಿಜಯಪುರ, ಬಾಗಲಕೋಟ, ಕಲಬುರ್ಗಿ, ಯಾದಗಿರಿ, ಬೀದರ್ ಮತ್ತು ಇತರ ಜಿಲ್ಲೆಗಳಿಂದ ಕೊಲ್ಲಾಪುರ, ಅಜರಾ, ಮೀರಜ್, ಸಾಂಗಲಿ, ಇಚಲಕರಂಜಿ, ಪುಣೆ, ಮುಂಬೈ ಮತ್ತು ಇತರ ಗ್ರಾಮಗಳಿಗೆ ಚಲಿಸುವ ಬಸ್ಸುಗಳಲ್ಲಿ ಆದ ಪ್ರಯಾಣಕರ ಕೊರತೆಯೇ ಇಷ್ಟೊಂದು ನಷ್ಟ ತರುವುದಾದರೇ ಇನ್ನು ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಿದರೆ ಆದಾಯ ಪಾತಾಳ ಸೇರಲಿದೆ. ಅದಕ್ಕೆ ತಕ್ಕಂತೆ ಸರ್ಕಾರ ಸಬ್ಸಿಡಿ ನೀಡದಿದ್ದರೇ ಡಿಸೆಲ್ ಹಾಕುವುದೂ ಕೆಎಸ್‌ಆರ್‌ಟಿಸಿಗೆ ಹೊರೆಯಾಗಲಿದೆ ಎನ್ನುವುದು ಅಧಿಕಾರಿಗಳ ಕಳವಳ.

 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net