ಹುಬ್ಬಳ್ಳಿ: ಮುಕ್ತ ಮಾರುಕಟ್ಟೆಯಲ್ಲಿ ಹತ್ತಿ ಬೆಲೆ ಇಳಿಕೆಯಾಗಿರುವ ಸಂದರ್ಭದಲ್ಲಿ ಭಾರತ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಲು ಮುಂದೆ ಬಂದಿದೆ.
ಭಾರತೀಯ ಹತ್ತಿ ನಿಗಮ ನಿಯಮಿತ (ಸಿಸಿಐ) ವತಿಯಿಂದ ಪ್ರಸಕ್ತ ಸಾಲಿನಲ್ಲಿ (2024&25) ಹತ್ತಿ ಖರೀದಿ ಆರಂಭಿಸಲಾಗಿದೆ. ಹತ್ತಿ ಬೆಳೆಗಾರರ ಹಿತ ಕಾಪಾಡುವ ಸಲುವಾಗಿ ನಿಗಮವು ಹುಬ್ಬಳ್ಳಿ ಶಾಖೆ ವ್ಯಾಪ್ತಿಯ 10 ಜಿಲ್ಲೆಗಳಲ್ಲಿ ಒಟ್ಟು 26 ಖರೀದಿ ಕೇಂದ್ರಗಳನ್ನು ತೆರೆದಿದೆ.
ನಿಗಮವು ಕನಿಷ್ಠ ಬೆಂಬಲ ಬೆಲೆಯಲ್ಲಿ ಹತ್ತಿ ಮಾರಾಟ ಮಾಡಲು ಬಯಸುವ ರೈತರಿಂದ ಖರೀದಿ ಮಾಡಲಿದೆ. ಇದಕ್ಕಾಗಿ ನೋಂದಣಿ ಪ್ರಕ್ರಿಯೆ ನಡೆಸಲಿದೆ. ಶೇ.8 ಸರಾಸರಿ ತೇವಾಂಶ ಮೀರದ ಗುಣಮಟ್ಟದ ಹತ್ತಿಗೆ ಸಂಪೂರ್ಣ ಎಂಎಸ್ಪಿ ಲಭ್ಯವಾಗಲಿದೆ. ಶೇ.8ಕ್ಕಿಂತ ಹೆಚ್ಚು ಶೇ.12ಕ್ಕಿಂತ ಕಡಿಮೆ ಇರುವ ಹತ್ತಿಗೆ ತೇವಾಂಶ ಪ್ರಮಾಣಕ್ಕೆ ಅನುಗುಣವಾಗಿ ಎಂಎಸ್ಪಿ ಬೆಲೆಯಲ್ಲಿ ಕಡಿತವಾಗಲಿದೆ.
ಹಾಗಾಗಿ, ರೈತರು ತೇವಾಂಶವನ್ನು ಗಮನಿಸಬೇಕು. ಬೆಲೆ ಕಡಿತಕ್ಕೆ ಅವಕಾಶ ಇಲ್ಲದಂತೆ ಗುಣಮಟ್ಟದ ಹತ್ತಿ ತರಬೇಕು. ಪ್ರತಿ ಕ್ವಿಂಟಾಲ್ ಮಧ್ಯಮ ಎಳೆಯ ಹತ್ತಿಯನ್ನು 7,121 ರೂ. ಹಾಗೂ ಉತ್ತಮ ಗುಣಮಟ್ಟದ ಉದ್ದ ಎಳೆಯ ಹತ್ತಿಗೆ ಪ್ರತಿ ಕ್ವಿಂಟಾಲ್ಗೆ 7,521 ರೂ.ನಂತೆ ಖರೀದಿ ಮಾಡಲಿದೆ.
ರೈತರು ಹೆಚ್ಚಿನ ಮಾಹಿತಿಗೆ "ಸಿಒಟಿಟಿ- ಎಎಲ್ಎಲ್ವೈ' ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಬಹುದು ಎಂದು ಸಿಸಿಐ ಪ್ರಕಟಣೆ ಕೋರಿದೆ.