

ಮಂಗಳೂರು: ಯುವ ಜನತೆ ಅವರ ಆರ್ಥಿಕ ಸಾಮರ್ಥ್ಯಕ್ಕನುಗುಣವಾಗಿ ಉದ್ಯಮ ಆರಂಭಿಸಿ ಬೆಳೆಯಬೇಕು ಎಂದು ನಿಟ್ಟೆ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ವಿನಯ್ ಹೆಗ್ಡೆ ಹೇಳಿದರು.
ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬುಧವಾರ ನಡೆದ ಎಂಎಸ್‌ಎಂಇ ಎಕ್ಸ್‌ಪೋ ಉದ್ಘಾಟಿಸಿ, ಅವರು ಮಾತನಾಡಿದರು. ಎಂಎಸ್‌ಎಂಇಯಲ್ಲಿ ತಂತ್ರಜ್ಞಾನ, ಮಾರುಕಟ್ಟೆಯ ತಂತ್ರಗಾರಿಕೆ ಜತೆಗೆ ಬಂಡವಾಳ ಹೂಡಿಕೆಯ ಸಾಮರ್ಥ್ಯದ ಮೇಲೆ ಉದ್ದಿಮೆಗಳು ಸಾಗುತ್ತದೆ. ಎಲ್ಲವೂ ಸರಿಯಾಗಿದ್ದರೆ ಅದು ಯಶಸ್ಸಿನ ಕಡೆಗೆ ಪ್ರಯಾಣ ಬೆಳೆಸುತ್ತದೆ.
ಎಂಎಸ್‌ಎಂಇಯಲ್ಲಿ ಇರುವ ಉದ್ದಿಮೆದಾರರು ತಮ್ಮ ಉತ್ಪನ್ನಗಳನ್ನು ಉತ್ತಮ ಗುಣಮಟ್ಟದಲ್ಲಿ ತಯಾರಿಸುವ ಕೆಲಸ ಮಾಡಿದರೆ ಗ್ರಾಹಕರು ನಿಮ್ಮ ಕೈಹಿಡಿಯುತ್ತಾರೆ. ಮುಂದೆ ಇರುವ ಸಣ್ಣ ಉದ್ದಿಮೆಯಿಂದ ಆರಂಭಿಸಿ ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳನ್ನು ಮಾಡುವಷ್ಟು ನೀವು ಸಮರ್ಥರಾಗುತ್ತೀರಿ ಎಂದು ವಿನಯ್ ಹೆಗ್ಡೆ ಹೇಳಿದರು.
ಮಂಗಳೂರು ಕೆನರಾ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷ ಅನಂತೇಶ್ ವಿ. ಪ್ರಭು ಮಾತನಾಡಿ, ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಿನಂತೆ ಎಂಎಸ್‌ಎಂಇ ಕೆಲಸ ಮಾಡುತ್ತಿದೆ. ಅತೀ ಹೆಚ್ಚು ಉದ್ಯೋಗ ನೀಡುವ ಕ್ಷೇತ್ರದ ಜತೆಗೆ ದೇಶದ ಜಿಡಿಪಿಗೂ ಕಾಣಿಕೆ ನೀಡುತ್ತಿದೆ. ದೊಡ್ಡ ಉದ್ದಿಮೆಗಳ ಪ್ರಗತಿಯಲ್ಲಿ ಎಂಎಸ್‌ಎಂಇಗಳ ಕೊಡುಗೆ ಅಪಾರವಿದೆ. ಈ ನಿಟ್ಟಿನಲ್ಲಿ ಎಂಎಸ್‌ಎಂಇಗಳಿಗೆ ಇಂತಹ ಕಾರ‌್ಯಕ್ರಮ ಒಂದು ವೇದಿಕೆಯನ್ನು ನೀಡಿದೆ ಎಂದರು.
(ಎಂಎಸ್‌ಎಂಇ) ಮಂಗಳೂರಿನ ಜಂಟಿ ನಿರ್ದೇಶಕ ದೇವರಾಜ್ ಕೆ. ಅಧ್ಯಕ್ಷತೆ ವಹಿಸಿದ್ದರು. ಎಸ್‌ಬಿಐ ಮಂಗಳೂರಿನ ಡಿಜಿಎಂ ಜೋಬಿ ಜೋಸ್, ಕೆನರಾ ಬ್ಯಾಂಕ್‌ನ ಡಿಜಿಎಂ ಶ್ರೀಕಾಂತ್ ವಿ.ಕೆ, ಬೆಂಗಳೂರಿನ ಎನ್‌ಎಸ್‌ಐಸಿ ಡಿಜಿಎಂ ವಿ.ಸುರೇಶ್ ಬಾಬು, ಡಿಐಸಿ ಮಂಗಳೂರಿನ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್, ಮಂಗಳೂರು ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ವಿಶಾಲ್ ಸಾಲ್ಯಾನ್, ಎಂಎಸ್‌ಎಂಇಯ ಸಹಾಯಕ ನಿರ್ದೇಶಕರಾದ ಶ್ರುತಿ ಜಿ.ಕೆ. ಹಾಗೂ ಸುಂದರ ಶೇರಿಗಾರ್ ಉಪಸ್ಥಿತರಿದ್ದರು. ಎರಡು ದಿನಗಳ ಕಾಲ ನಡೆಯುವ ಈ ಎಕ್‌ಸೆೆದಲ್ಲಿ ಎಂಎಸ್‌ಎಂಇ ವಲಯದ ಯೋಜನೆಗಳು ಮತ್ತು ಪ್ರಯೋಜನಗಳ ಕುರಿತು ಉಪನ್ಯಾಸವಿದೆ. ವಸ್ತು ಪ್ರದರ್ಶನದಲ್ಲಿ 70ಕ್ಕೂ ಅಧಿಕ ಮಳಿಗೆಗಳು ಇದ್ದು ಗ್ರಾಹಕರಿಗೆ ಉಚಿತ ಪ್ರವೇಶ ಇರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.