ಎಂಆರ್‌ಪಿಎಲ್ ವಿಷಾನಿಲ ಸೋರಿಕೆ ಇಬ್ಬರು ಸಿಬ್ಬಂದಿ ಸಾವು

mng--12 July Bijil prasad
Published on

ಮಂಗಳೂರು: ನಗರದ ಹೊರ ವಲಯದ ಸುರತ್ಕಲ್ ಬಳಿ ಇರುವ ಎಂಆರ್‌ಪಿಎಲ್ ಸ್ಥಾವರದಲ್ಲಿ ವಿಷಾನಿಲ ಸೋರಿಕೆಯಾಗಿ ಉತ್ತರ ಪ್ರದೇಶ ಹಾಗೂ ಕೇರಳ ಮೂಲದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಗದಗ ಮೂಲದ ಇನ್ನೋರ್ವ ಗಂಭೀರವಾಗಿ ಅಸ್ವಸ್ಥಗೊಂಡಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯ ದೀಪಚಂದ್ರ (33) ಹಾಗೂ ಕೇರಳ ಮೂಲದ ಬಿಜಿಲ್ ಪ್ರಸಾದ್ (33) ಮೃತಪಟ್ಟವರು. ಗದಗ ಮೂಲದ ವಿನಾಯಕ್ ಗಂಭೀರ ಸ್ವರೂಪದಲ್ಲಿ ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೆಟ್ರೋ ಕೆಮಿಕಲ್ ಘಟಕದಲ್ಲಿ ಒಎಂಎಸ್ (ಆಯಿಲ್ ಮೂವ್‌ಮೆಂಟ್ ಸರ್ವಿಸ್) ವಿಭಾಗದ ಟ್ಯಾಂಕ್‌ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡುತ್ತಿದ್ದಾಗ ಘಟನೆ ಸಂಭವಿಸಿದೆ. ಮುಖ, ಕಣ್ಣಿಗೆ ಕವಚ ಧರಿಸಿದ್ದರೂ ಎಚ್2ಎಸ್ ಗ್ಯಾಸ್ ಸೋರಿಕೆಯಾದ ಪರಿಣಾಮ ಮೂವರು ಗಂಭೀರವಾಗಿ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಸುರತ್ಕಲ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಇಬ್ಬರು ಚಿಕತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಇನ್ನೊಬ್ಬರು ಚೇತರಿಸಿಕೊಳ್ಳುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಾವರದಲ್ಲಿ ಗ್ಯಾಸ್ ಸೋರಿಕೆಯಾಗುತ್ತಿರುವುದು ಗಮನಕ್ಕೆ ಬಂದ ತಕ್ಷಣ ಅಗ್ನಿಶಮನ ಮತ್ತು ಸುರಕ್ಷತಾ ತಂಡ ತಕ್ಷಣ ಕಾರ್ಯಾಚರಣೆ ನಡೆಸಿ ಉಂಟಾಗಿದ್ದ ದೋಷವನ್ನು ಸರಿಪಡಿಸಿದೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ತನಿಖೆಗೆ ಸಮಿತಿ ರಚನೆ: ದುರಂತಕ್ಕೆ ಸಂಬಂಧಿಸಿ ತನಿಖೆಗೆ ಎಂಆರ್‌ಪಿಎಲ್ ಆಡಳಿತ ಸಮಿತಿ ರಚಿಸಿದೆ. ಗ್ರೂಪ್ ಜನರಲ್ ಮ್ಯಾನೇಜರ್‌ಗಳನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ತನಿಖೆ ನಡೆಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net