ಎಂಆರ್‌ಪಿಎಲ್ ಡೀಸೆಲ್‌ಗೆ ಡಿಮಾಂಡ್

MRPL new
Published on

ಮಂಗಳೂರು: ರಾಜ್ಯದ ಏಕೈಕ ರಿಫೈನರಿ ಆಗಿರುವ ಎಂಆರ್‌ಪಿಎಲ್‌ನಲ್ಲಿ ಆರ್ಥಿಕ ಹಿಂಜರಿತ ಪರಿಣಾಮ ಇಳಿಮುಖಗೊಂಡಿದ್ದ ಡೀಸೆಲ್ ಡಿಮಾಂಡ್ ಇದೀಗ ಮತ್ತೆ ಏರಲು ಶುರುವಾಗಿದೆ.

ಬಿಎಸ್-6 ಇಂಧನಕ್ಕೆ ಕಂಪನಿ ಪರಿವರ್ತನೆಗೊಂಡ ಬಳಿಕ ಸುಮಾರು 2-3 ತಿಂಗಳಿನಿಂದ ಡೀಸೆಲ್‌ಗೆ ಬೇಡಿಕೆ ಕುಸಿತ ಕಂಡಿತ್ತು. ಅದೇ ಕಾರಣಕ್ಕೆ ದೇಶೀಯ ಮಾರುಕಟ್ಟೆ ಬಿಟ್ಟು ವಿದೇಶಕ್ಕೆ ರಫ್ತು ಮಾಡಲು ಕಂಪನಿ ಮುಂದಾಯಿತು. ವೈಯಕ್ತಿಕವಾಗಿ ಕಾರುಗಳಿಗೆ ಡೀಸೆಲ್ ಬಳಕೆಯಾಗುವುದು ಶೇ.20ರಷ್ಟಿರಬಹುದು, ಉಳಿದ ಶೇ.80ರಷ್ಟೂ ಟ್ರೇನ್, ಸಾರಿಗೆ ಕ್ಷೇತ್ರ, ಕೈಗಾರಿಕಾ ಕ್ಷೇತ್ರಕ್ಕೇ ಡೀಸೆಲ್ ಹೆಚ್ಚು ಬಳಕೆಯಾಗುತ್ತದೆ.

ಈ ಕ್ಷೇತ್ರಗಳಿಂದ ಡಿಮಾಂಡ್ ಇಳಿದದ್ದೇ ಡೀಸೆಲ್ ಮಾರಾಟ ಕಡಿಮೆಗೆ ಕಾರಣವಿರಬಹುದು ಎಂದು ಅಧಿಕಾರಿಗಳು ವಿಶ್ಲೇಷಿಸಿದ್ದಾರೆ. ನವೆಂಬರ್, ಡಿಸೆಂಬರ್ 2019 ಅಲ್ಲದೆ ಜನವರಿ ಮಧ್ಯಭಾಗದವರೆಗೂ ಇದೇ ಪರಿಸ್ಥಿತಿ ಇದ್ದರೆ ಆ ಬಳಿಕ ಚೇತರಿಕೆ ಶುರುವಾಗಿದೆ. ಸಾಮಾನ್ಯವಾಗಿ ಸರಾಸರಿ 550 ಟಿಎಂಟಿ(ಥೌಸಂಡ್ ಮೆಟ್ರಿಕ್ ಟನ್) ಡೀಸೆಲ್ ಉತ್ಪಾದನೆಯಾಗುತ್ತಿದ್ದರೆ ಅದರ ಶೇ.50ರಷ್ಟನ್ನೂ ರಫ್ತು ಮಾಡುವ ಪರಿಸ್ಥಿತಿಗೆ ಕಂಪನಿ ತಲಪಿತ್ತು.

ಈಗ ಫೆಬ್ರವರಿ ತಿಂಗಳಲ್ಲಿ ಚಿತ್ರಣ ಬದಲಾಗಿದೆ, ಶೇ.100ಕ್ಕೆ ನೂರೂ ದೇಶೀಯವಾಗಿಯೇ ಮಾರಾಟವಾಗತೊಡಗಿದೆ. ಆರ್ಥಿಕತೆಯಲ್ಲಿ ಚೇತರಿಕೆ ಇರಬಹುದು ಅಥವಾ ದೇಶದ ಇತರ ಕಡೆ ಯಾವುದಾದರೂ ರಿಫೈನರಿ ಬಿಎಸ್ 6 ಬದಲಾವಣೆಗೆಂದು ಷಟ್‌ಡೌನ್ ಆಗಿರಲೂಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಸ್ತುತ ಬಿಎಸ್6 ಮಾತ್ರ

ವಾಹನಗಳ ಮಾಲಿನ್ಯ ಕಡಿಮೆಮಾಡುವ ದೃಷ್ಟಿಯಿಂದ ಏಪ್ರಿಲ್ ಒಳಗೆ ಎಲ್ಲ ರಿಫೈನರಿಗಳೂ ಬಿಎಸ್6ಗೆ ಪರಿವರ್ತಿತಗೊಳ್ಳಬೇಕು ಎಂದು ಕೇಂದ್ರ ಸರ್ಕಾರದ ಸೂಚನೆಯಿದ್ದು, ಎಂಆರ್‌ಪಿಎಲ್ ಈಗಾಗಲೇ ಪೂರ್ತಿಯಾಗಿ ಬಿಎಸ್6 ಗ್ರೇಡ್ ಇಂಧನವನ್ನೇ ಉತ್ಪಾದಿಸುತ್ತಿದೆ. ರಾಜ್ಯಾದ್ಯಂತ ಬಿಎಸ್6, ಬಿಎಸ್4 ಎರಡಕ್ಕೂ ಬೇಡಿಕೆ ಇದ್ದರೂ ನಾವು ಬಿಎಸ್ 6 ಮಾತ್ರವೇ ಪೂರೈಕೆ ಮಾಡುತ್ತಿದೇವೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಎಂಆರ್‌ಪಿಎಲ್‌ನಲ್ಲಿ ಹಳೇ ಸ್ಥಾವರಗಳಲ್ಲೇ ಸದ್ಯ ಇರುವ ಹಳೆಯ ಯುನಿಟ್‌ನಲ್ಲಿಯೇ ಬಿಎಸ್6 ಇಂಧನ ತಯಾರಿಸಲಾಗುತ್ತಿರುವ ಕಾರಣ ಉತ್ಪಾದನಾ ವೆಚ್ಚ ಹೆಚ್ಚು. ಆದರೆ, ಬಿಎಸ್6 ಉತ್ಪಾದನೆಗಾಗಿಯೇ ಎಂಆರ್‌ಪಿಎಲ್‌ನಲ್ಲಿ ಹೊಸ ಯು ನಿಟ್ ಮಾಡಲಾಗುತ್ತಿದ್ದು, ಇದರ ಕಾಮಗಾರಿ ಪೂರ್ಣತೆಯ ಹಂತ ತಲಪಿದೆ, 1800 ಕೋಟಿ ರೂ.ಅಂದಾಜು ವೆಚ್ಚದ ಈ ಘಟಕಗಳು ಕಾರ್ಯಾರಂಭಗೊಂಡ ಬಳಿಕ ಖರ್ಚು ಇಳಿಮುಖವಾಗಲಿದೆ. ದೇಶದಲ್ಲಿ 2000ದಲ್ಲಿ ಬಿಎಸ್ ಮಾನದಂಡ ಜಾರಿಗೆ ಬಂದಿತ್ತು. 2003ರಲ್ಲಿ ರಾಷ್ಟ್ರೀಯ ವಾಹನ ಇಂಧನ ನೀತಿ ಜಾರಿಗೆ ಬಂತು. 2005ರಲ್ಲಿ ಬಿಎಸ್ 2, 2010ರಲ್ಲಿ ಬಿಎಸ್ 3 ಹಾಗೂ 2017ರ ಎಪ್ರಿಲ್‌ನಿಂದ ದೇಶದಲ್ಲಿ ಎಲ್ಲಾ ವಾಹನಗಳು ಬಿಎಸ್ 4 ಮಾನದಂಡವನ್ನು ಹೊಂದಿದೆ.

ಪ್ರತೀ ವರ್ಷ 6 ಮಿ.ಟನ್ ಡೀಸೆಲ್ ಉತ್ಪಾದನೆ

ಎಂಆರ್‌ಪಿಎಲ್ ಉತ್ಪಾದಿಸುವ ಒಟ್ಟು ಇಂಧನದ ಪೈಕಿ ಶೇ.75ರಷ್ಟು ಕರ್ನಾಟಕದ ಒಳಗೆ ಹಾಗೂ ಗೋವಾ, ಕೇರಳಕ್ಕೆ ಸರಬರಾಜು ಮಾಡಲಾಗುತ್ತಿದೆ. ಎಚ್‌ಪಿಸಿಎಲ್, ಬಿಪಿಸಿಎಲ್, ಐಓಸಿಎಲ್‌ಗೆ ಎಂಆರ್‌ಪಿಎಲ್ ಇಂಧನ ಪೂರೈಸುತ್ತಿದೆ. ಪ್ರತೀ ವರ್ಷ ಸುಮಾರು 6 ಮಿ.ಟನ್‌ನಷ್ಟು ಡೀಸೆಲ್, 1 ಮಿ.ಟನ್ ಪೆಟ್ರೋಲ್, 1 ಮಿ.ಟನ್ ಎಲ್‌ಪಿಜಿಯನ್ನು ಎಂಆರ್‌ಪಿಎಲ್ ಉತ್ಪಾದಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net