ಭಾರತದ ಸೈನಿಕರ ಒಳಿತಿಗಾಗಿ ಮೃತ್ಯುಂಜಯ ಹೋಮ: ನಗರದ ಶನೇಶ್ಚರ ದೇವಾಲಯದಲ್ಲಿ ಆಯೋಜನೆ

Mrityunjaya Homa Mandya
Published on

ಮಂಡ್ಯ: ಪಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಭಾರತ ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಸೈನಿಕರ ಒಳಿತಿಗಾಗಿ ನಗರದ ಶನೇಶ್ಚರಸ್ವಾಮಿ ದೇವಸ್ಥಾನದಲ್ಲಿ ಮಹಾ ಮೃತ್ಯುಂಜಯ ಹೋಮ ನಡೆಸಲಾಯಿತು.

ಕಾರ್ಯಾಚರಣೆ ಮಾಡಿರುವ ಸೈನಿಕರಿಗೆ ಮತ್ತಷ್ಟು ಬಲ ತುಂಬಲು ಚಾಮುಂಡೇಶ್ವರಿನಗರದ ಶನೇಶ್ಚರ ದೇವಾಲಯದಲ್ಲಿ ಹಿಂದು ಹಿತರಕ್ಷಣಾ ಸಮಿತಿ ವತಿಯಿಂದ ಶನೇಶ್ಚರ ದೇವಾಲಯದಲ್ಲಿ ಮಹಾಮೃತ್ಯುಂಜಯ ಹೋಮ ಏರ್ಪಡಿಸಲಾಗಿತ್ತು. ಭಾರತದ ಸೈನಿಕರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗದಂತೆ ಕಾಪಾಡುವಂತೆ ಹೋಮ ಕಾರ್ಯಕ್ರಮದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ದೇವಾಲಯದ ಆವರಣದಲ್ಲಿ ಅಗ್ನಿಕುಂಡವನ್ನು ಇಟ್ಟು ವಿಶೇಷವಾಗಿ ಅಲಂಕರಿಸಿ, ಗಣಪತಿ ಪೂಜೆ, ಪುಣ್ಯಾಹಾ, ನವಗ್ರಹಶಾಂತಿ, ಗಣಪತಿ ಹೋಮ, ಮೃತ್ಯುಂಜಯ ಪೂಜೆ, ಮೃತ್ಯುಂಜಯ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯವನ್ನು ಶಾಸ್ತ್ರೋಕ್ತವಾಗಿ, ವಿಧಿ ವಿಧಾನದ ಮೂಲಕ ನಡೆಸಲಾಯಿತು. ಎಲ್ಲ ರೀತಿಯಲೂ ನಮ್ಮ ಸೈನಿಕರಿಗೆ ದೈವಬಲ ಸಿಗಲಿ ಎಂಬ ಸದುದ್ದೇಶದಿಂದ ಹೋಮ ಮತ್ತು ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಶನೇಶ್ಚರ ದೇವಾಲಯದ ಪ್ರಧಾನ ಅರ್ಚಕ ನವೀನ್ ದೀಕ್ಷಿತ್ ನೇತೃತ್ವದಲ್ಲಿ ಪೂಜೆ ನಡೆಸಲಾಯಿತು.

ಜಿಲ್ಲಾ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಮಂಟೇಸ್ವಾಮಿ, ಜೀವಧಾರೆ ಟ್ರಸ್ಟ್‌ನ ನಟರಾಜು, ಹಿಂದು ಹಿತರಕ್ಷಣಾ ಸಮಿತಿಯ ಮುಖಂಡರು, ಸೈನಿಕರ ಕುಟುಂಬದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net