

ಗಂಗಾವತಿ: ಅಕ್ಷಯ ತೃತೀಯ ನಿಮಿತ್ತ ನಗರದ ರಾಯರ ಮಠದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ವೃಂದಾವನಕ್ಕೆ ಶ್ರೀಗಂಧ ಲೇಪನ ಅಲಂಕಾರ ಪೂಜೆ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆಯಿಂದಲೇ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದ್ದು, ವೃಂದಾವನಕ್ಕೆ ನಿರ್ಮಾಲ್ಯ ವಿಸರ್ಜನೆ, ಲ ಪಂಚಾಮೃತಾಭಿಷೇಕ, ಶ್ರೀಗಂಧಲೇಪನ, ಹೂವಿನ ಅಲಂಕಾರ, ಅಷ್ಟೋತ್ತರ ಪಾರಾಯಣ, ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಜರುಗಿತು.
ಅಕ್ಷಯ ತೃತೀಯ ವಿಶೇಷತೆ ಕುರಿತು ಪ್ರಧಾನ ಅರ್ಚಕ ಭೀಮಾಚಾರ್ ಮಾತನಾಡಿದರು. ವಿಚಾರಣ ಕರ್ತ ರಾಮಕೃಷ್ಣ ಜಹಾಗೀರದಾರ್, ವಿಷ್ಣುತೀರ್ಥ, ಹನುಮಂತರಾವ್, ನವಲಿ ಪ್ರಲ್ಹಾದರಾವ್ ಇತರರಿದ್ದರು.
ನಗರದ ಸತ್ಯಾಂಜನೇಯ ದೇವಾಲಯದಲ್ಲಿ ಶ್ರೀ ಸತ್ಯಾಂಜನೇಯ ಮೂರ್ತಿಯನ್ನು ಶ್ರೀ ಗಂಧ ಲೇಪನದೊಂದಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಪಂಚಾಮೃತಾಭಿಷೇಕ, ವಿಶೇಷ ಪೂಜೆ, ಪಲ್ಲಕ್ಕಿ ಸೇವೆ ಮತ್ತು ಪ್ರಸಾದ ವಿತರಣೆ ಜರುಗಿತು.
ಶ್ರೀ ಸತ್ಯನಾರಾಯಣ ದೇವಾಲಯ: ನಗರ ಶ್ರೀ ಸತ್ಯನಾರಾಯಣ ಪೇಟೆಯ ಶ್ರೀ ಸತ್ಯನಾರಾಯಣ ಸ್ವಾಮಿ ದೇವಾಲಯದಲ್ಲಿ ಅಕ್ಷಯತೃತೀಯ ಮತ್ತು ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ತತ್ವ ಹೋಮ ಕಲಶಾಭಿಷೇಕ, ಅಲಂಕಾರ ಮಹಾಪೂಜೆ, ಪ್ರವಚನ, ಹಸ್ತೋದಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ಮತ್ತು ಸಂಜೆ ರಥೋತ್ಸವ ಜರುಗಿತು.
ವಿದ್ವಾನ್ ಶ್ಯಾಮಾಚಾರ್ ಬಂಡಿ, ವ್ಯವಸ್ಥಾಪಕ ವಾದಿರಾಜಾಚಾರ್ ಕಲ್ಮಂಗಿ, ಮುಖಂಡರಾದ ರಾಘವೇಂದ್ರ ಮೇಗೂರು, ಲಕ್ಷ್ಮಿನಾರಾಯಣ ಶ್ರೇಷ್ಠಿ ಇತರರಿದ್ದರು.