ಮೃತ್ಯುಂಜಯ ಹೊಳೆಯಲ್ಲಿ ಹೂಳು!

hole
Published on

ಶ್ರವಣ್‌ಕುಮಾರ್ ನಾಳ ಪುತ್ತೂರು

2 ವರ್ಷದ ಹಿಂದೆ ಪಶ್ಚಿಮಘಟ್ಟದ ಬೆಟ್ಟದಿಂದ ಏಕಾಏಕಿ ನೀರಿನ ಹರಿಯುವಿಕೆ ಹೆಚ್ಚಾದ ಪರಿಣಾಮ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗಡಿಭಾಗ ಪ್ರವಾಹದಿಂದ ತತ್ತರಿಸಿ ನದಿಗಳಲ್ಲಿ ಮರಳು ಸಹಿತ ಅಪಾರ ಪ್ರಮಾಣದ ಹೂಳು ತುಂಬಿತ್ತು. ಲಾಕ್‌ಡೌನ್ ಮಧ್ಯೆಯೂ ಬಹುತೇಕ ನದಿಗಳ ಹೂಳು ತೆರವಿಗೆ ಕ್ರಮ ಕೈಗೊಂಡಿದ್ದರೂ ಮೃತ್ಯುಂಜಯ ಹೊಳೆಯಲ್ಲಿ ಶೇ.70ರಷ್ಟು ಹೂಳು ಉಳಿಕೆಯಾಗಿತ್ತು. ಈ ಬಾರಿಯೂ ಮೃತ್ಯುಂಜಯ ಹೊಳೆಯುದ್ದಕ್ಕೂ ಹೂಳು ತುಂಬಿದ್ದು, ಡ್ಯಾಂಗಳಲ್ಲಿ ನೀರು ಶೇಖರಣಾ ಯೋಜನೆಗೆ ಬ್ರೇಕ್ ಬಿದ್ದಿದೆ.

ಪ್ರತಿವರ್ಷ ಬೇಸಿಗೆ ಆರಂಭಕ್ಕೂ ಮುನ್ನ ಮೃತ್ಯುಂಜಯ ಹೊಳೆಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ 7 ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸಿ ನೀರು ಶೇಖರಿಸಲಾಗುತ್ತಿತ್ತು. ಆದರೆ ಈ ಬಾರಿ ಅಪಾರ ಪ್ರಮಾಣದ ಮರಳು ಕಿಂಡಿಅಣೆಕಟ್ಟು ಪ್ರದೇಶಗಳಲ್ಲಿ ಶೇಖರಣೆಯಾಗಿದ್ದರಿಂದ ಚಾರ್ಮಾಡಿ ಅಣೆಕಟ್ಟು ಸಹಿತ ಹಲವು ಪ್ರದೇಶಗಳಲ್ಲಿ ಡ್ಯಾಂಗಳಲ್ಲಿ ನೀರು ಶೇಖರಣಾ ಯೋಜನೆಗೆ ಬ್ರೇಕ್ ಬಿದ್ದಿದೆ.

ಡ್ಯಾಂ ಪೂರ್ತಿ ಮರಳಿನ ರಾಶಿ: ಕಳೆದ ವರ್ಷ ಪ್ರವಾಹದ ತೀವ್ರತೆಗೆ ಚಾರ್ಮಾಡಿ ಸಮೀಪ ಅರಣ್ಯ ಮಧ್ಯೆ ಮೃತ್ಯುಂಜಯ ನದಿಗೆ ಕಟ್ಟಿದ್ದ ತ್ರಿನೇತ್ರ ಡ್ಯಾಂ ಪೂರ್ಣ ಪ್ರಮಾಣದಲ್ಲಿ ಒಡೆದು ಹೋಗಿದ್ದು, ಡ್ಯಾಂ ಮರುನಿರ್ಮಾಣಗೊಳಿಸದೆ ಇಲ್ಲಿ ನೀರು ಶೇಖರಣೆ ಅಸಾಧ್ಯ. ಡ್ಯಾಂನ ಮೇಲ್ಭಾಗ 10 ಕಿ.ಮೀ. ಹಾಗೂ ಕೆಳಭಾಗ 8ರಿಂದ 10 ಕಿ.ಮೀ ವ್ಯಾಪ್ತಿಯ ನದಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಮರಳು ಮಿಶ್ರಿತ ಹೂಳು ತುಂಬಿಕೊಂಡಿದೆ. ಹೊಳೆಯಲ್ಲಿ 5ರಿಂದ 8ಅಡಿ ಮರಳು ಮಿಶ್ರಿತ ಹೂಳು ತುಂಬಿ ಬಹುತೇಕ ಕಡೆ ನದಿ ಬಯಲಿನಂತಾಗಿದೆ. ಈ ಬಾರಿಯ ಮಳೆಗಾಲದಲ್ಲಿ ಹೊಸಮಠ, ಕುಕ್ಕಾವು, ದಿಡುಪೆ, ಕೆಂಬಾರು, ಮಕ್ಕೆ, ಪೆರ್ಲ ಪ್ರದೇಶದ ನದಿ ಸಮೀಪ ಮತ್ತೆ ಮರಳು ರಾಶಿ ಬಿದ್ದಿದೆ.

ಯಾವುದೇ ಕ್ರಮ ಇಲ್ಲ: ನೆಕ್ಕಿಲಾಡಿ ಡ್ಯಾಂ ಸುತ್ತಮುತ್ತ ಮರಳು ತೆರಳುಗೊಳಿಸುವಂತೆ ಇತ್ತೀಚೆಗೆ ಪುತ್ತೂರು ನಗರಸಭೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ. ಸಣ್ಣ ನೀರಾವರಿ ಇಲಾಖೆಯೂ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ತಡೆಯಲು ಜಿಲ್ಲಾಡಳಿತಕ್ಕೆ ಮನವಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಬಹುತೇಕ ಡ್ಯಾಂ, ಅಣೆಕಟ್ಟು ವ್ಯಾಪ್ತಿಯಲ್ಲಿ ಮರಳು, ಹೂಳು ತುಂಬಿಕೊಂಡು ನೀರು ಶೇಖರಣೆಗೆ ತೊಂದರೆಯಾಗುತ್ತಿರುವ ಬಗ್ಗೆ ಮಾಹಿತಿ ದೊರಕಿದೆ. ಪ್ರಸ್ತುತ ಶಂಭೂರು ಸೇರಿ ಒಂದೆರಡು ಕಡೆಗಳಲ್ಲಿ ಹೂಳು ತೆಗೆಯಲು ಕ್ರಮ ಕೈಗೊಳ್ಳಲಾಗಿದೆ. ಉಳಿದ ಕಡೆಗಳಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾಹಿತಿ ಪಡೆದು ನೀರಾವರಿ ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

- ಕೆ.ವಿ.ರಾಜೇಂದ್ರ, ದ.ಕ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net