

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ನಗರದ ಕೂಲಿಪುರ ಗ್ರಾಮದ ಹಿಪ್ಪೆತೋಪಿನಲ್ಲಿ ಶಮಿಗಿರಿ ಕ್ಷೇತ್ರವೆಂದೆ ಪ್ರಸಿದ್ಧವಾಗಿರುವ ಬಸವನಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯ ಮೃಗಯಾತ್ರೋತ್ಸವ ನೆರವೇರಿತು.
ಶ್ರೀಲಕ್ಷ್ಮೀವೆಂಕಟರಮಣ ಸ್ವಾಮಿಯ ಬ್ರಹ್ಮರಥೋತ್ಸವದ ನಂತರ ಶ್ರೀ ವೆಂಕಟರಮಣ ಸ್ವಾಮಿ, ವೈನತೇಯ ಹಾಗೂ ಲಕ್ಷ್ಮೀ ದೇವರುಗಳು ಮೃಗಯಾತ್ರೋತ್ಸವ, ವಾಯುವಿಹಾರ, ಜಲಕ್ರೀಡೋತ್ಸವ ಕಾರ್ಯಕ್ರಮವನ್ನು ಬಸವನಹಳ್ಳಿ ಹಾಗೂ ಕೂಲಿಪುರ ಗ್ರಾಮದ ಜನರು ನೆರವೇರಿಸಿದರು.
ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯ ದೇವಾಲಯಲ್ಲಿ ಚೈತ್ರಶುದ್ಧ, ಚಿತ್ತನಕ್ಷತ್ರದಂದು ಸಪ್ತದಿನ ಸಂಕಲ್ಪಿತವಾಗಿ ದೇವರಿಗೆ ವಿಶೇಷ ಪೂಜೆ, ಹೋಮ ಹವನಾದಿಗಳನ್ನು ನಡೆಸಲಾಗುವುದು. ದೇವರ ಬ್ರಹ್ಮರಥೋತ್ಸವ ನಂತರದ ದಿನ ದೇವರು ಹುಲಿ, ಜಿಂಕೆ ಸೇರಿ ವಿವಿಧ ಬೇಟೆಯಾಡುವುದು ಪ್ರತೀಕವಾಗಿದ್ದು, ಅದನ್ನೇ ಮೃಗಯಾತ್ರೋತ್ಸವ ಎಂದು ಕರೆಯಲ್ಪಟಿದೆ. ನಂತರ ವಸಂತೋತ್ಸವ ನೆರವೇರಿಸಲಾಗುವುದು ಎಂದು ಪ್ರಧಾನ ಆರ್ಚಕ ನಾರಾಯಣ್‌ಭಟ್ಟರ್ ತಿಳಿಸಿದರು.
ದೇವಾಲಯ ಅರ್ಚಕ ವಾಸುದೇವ, ಪಾರುಪತ್ತೇದಾರ್ ಶ್ರೀನಿವಾಸ್, ದೇವಾಲಯ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಜಗನಾಥ್, ಸದಸ್ಯ ಶ್ರೀನಿವಾಸ್, ಸ್ಟುಡಿಯೋ ಮಂಜುನಾಥ್, ಉಮೇಶ್‌ಗೌಡ, ಅಂಜಿನಪ್ಪ, ನರಸಿಂಹರಾಜು, ಮುಖಂಡ ರವಿ, ರುದ್ರೇಶ್, ಲೋಕೇಶ್, ಶ್ರೀನಿವಾಸ್, ಬಿಜೆಪಿ ಎಸ್‌ಟಿ ಮೋರ್ಚಾ ತಾಲೂಕು ಅಧ್ಯಕ್ಷ ಕೆಂಪರಾಮಯ್ಯ ಮತ್ತಿತರರು ಇದ್ದರು.