ಮೃಗಶಿರ ಮಳೆಯ ಆರ್ಭಟ

7 Dwd 5
Published on

ಧಾರವಾಡ: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ. ಮೃಗಶಿರ ಮಳೆ ಆರಂಭವಾದ ದಿನದಿಂದಲೇ ಮಳೆ ಆರ್ಭಟಿಸಿದ್ದು, ರೈತರ ನಿರೀಕ್ಷೆಗೆ ಪೂರಕವಾಗಿದೆ.
ಹವಾಮಾನ ಇಲಾಖೆಯ ನಿರೀಕ್ಷೆಯಂತೆಯೇ ಈ ಬಾರಿಯ ಮುಂಗಾರು ರಾಜ್ಯ ಪ್ರವೇಶವಾಗಿದೆ. ಜೂ. ೩ರಿಂದ ಜಿಲ್ಲೆಯ ಅಲ್ಲಲ್ಲಿ ಉತ್ತಮ ಮಳೆಯಾಗುತ್ತಿದೆ. ಶುಕ್ರವಾರ ಸಂಜೆ ಸುರಿದ ಮಳೆಯಿಂದ ನಗರದ ಅಲ್ಲಲ್ಲಿ ಅವಾಂತರಗಳು ಬೆಳಕಿಗೆ ಬಂದಿವೆ. ಇಲ್ಲಿನ ಎನ್‌ಟಿಟಿಎಫ್ ಬಳಿಯ ದೈವಜ್ಞ ಸಮುದಾಯ ಭವನ ಎದುರು ರಸ್ತೆ ಮೇಲೆ ಮಳೆ ನೀರು ಜಮಾವಣೆಗೊಂಡಿತು. ಇದರಿಂದ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಮಳೆಯಲ್ಲೇ ಕಾರ್ಯಾಚರಣೆಗೆ ಇಳಿದ ಪಾಲಿಕೆ ಕರ್ಮಚಾರಿಗಳು ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಸ್ವಚ್ಛತಾ ಕಾರ್ಯ ಕೈಗೊಂಡರು.
ಮತ್ತೊAದೆಡೆ ಗ್ರಾಮೀಣ ಭಾಗದಲ್ಲಿ ಉತ್ತಮ ಮಳೆಯಾಗಿದೆ. ನೀರಾವರಿ ವ್ಯವಸ್ಥೆ ಇದ್ದ ರೈತರು ಬಿತ್ತನೆ ಮಾಡಿದ್ದು, ಮೇಲಿಂದ ಮೇಲೆ ಸುರಿಯುತ್ತಿರುವ ಮಳೆ ಭೂಮಿಯ ತೇವಾಂಶ ಹೆಚ್ಚಳಕ್ಕೆ ನೆರವಾಗಿದೆ. ಹಾರೋಬೆಳವಡಿ, ಕಬ್ಬೂರು, ಕಲ್ಲೆ ಭಾಗದಲ್ಲಿ ಉತ್ತಮ ಮಳೆಯಾಗಿದೆ. ೨೦೧೯ರ ಭೀಕರ ಮಳೆಯ ಸಂದರ್ಭದಲ್ಲಿ ಕಿತ್ತುಹೋಗಿದ್ದ ಹಾರೋಬೆಳವಡಿ- ಇನಾಮಹೊಂಗಲ ಮಧ್ಯದ ಸೇತುವೆ ಮೇಲೆ ಮಳೆ ನೀರು ಹರಿದಿದೆ. ರೈತರ ಜಮೀನುಗಳಲ್ಲಿನ ಬದುವುಗಳು ಕಿತ್ತು ಹೋದ ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net