

ಕಳಸ: ಹೊರನಾಡಿನ ಜಗನ್ಮಾತೆ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಶ್ರೀ ಅನ್ನಪೂರ್ಣೇಶ್ವರಿಗೆ ಜಗಜ್ಜನನೀ ದುರ್ಗಾದೇವಿ ನಾಲ್ಕನೇ ಸ್ವರೂಪವಾದ ಮೃಗಾರೂಢಾ ಕೂಷ್ಮಾಂಡ ಅಲಂಕಾರ ಪೂಜೆ ನಡೆಸಲಾಯಿತು.
ಸಪ್ತಶತಿ ಪಾರಾಯಣ, ವೇದ ಪಾರಾಯಣ, ಸುಂದರ ಕಾಂಡ ಪಾರಾಯಣ, ಕುಂಕುಮಾರ್ಚನೆ ಶ್ರೀಸೂಕ್ತ ಹೋಮ ನೆರವೇರಿತು. ತನ್ನ ಮಂದ, ಮಧುರ ನಗುವಿನಿಂದ ಅರ್ಥಾತ್ ಬ್ರಹ್ಮಾಂಡವನ್ನು ಉತ್ಪನ್ನವಾಗಿಸುವ ಮತ್ತು ಇವಳ ವಾಹನ ಸಿಂಹವಾಗಿರುವ ಕಾರಣ ಇವಳನ್ನು ಮೃಗಾರೂಢಾ ಕೂಷ್ಮಾಂಡಾದೇವಿ ಎಂದು ಕರೆಯುತ್ತಾರೆ. ಇವಳಿಗೆ ಎಂಟು ಭುಜಗಳಿದ್ದು ಅಷ್ಟ ಭುಜಾದೇವಿ ಎಂದು ಖ್ಯಾತಳಾಗಿದ್ದಾಳೆ. ಇವಳ ಏಳು ಕೈಗಳಲ್ಲಿ ಕ್ರಮಶಃ ಕಮಂಡಲ, ಧನುಷ, ಭಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ ಮತ್ತು ಗದೆ ಇವೆ. ಇವಳನ್ನು ಭಕ್ತಿಯಿಂದ ಆರಾಧಿಸಿದರೆ ಆಯಸ್ಸು,ಯಶ, ಬಲ, ಆರೋಗ್ಯ ವೃದ್ಧಿಯಾಗುತ್ತದೆ.
ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಬೆಳಗ್ಗೆ ವಿದುಷಿ ವಿಭಾ ಶ್ರೀ ಸಿಂಹ ಮತ್ತು ತಂಡ ಬೆಂಗಳೂರು ಇವರಿಂದ ಭಕ್ತಿ ಸಂಗೀತ, ಸಂಜೆ ವಿದುಷಿ ಕಾತ್ಯಾಯಿನಿ ಶೃಂಗಾರಿ ಮತ್ತು ತಂಡ ಮೈಸೂರು ಇವರಿಂದ ಭರತ ನಾಟ್ಯ ಕಾರ್ಯಕ್ರಮ ನಡೆಯಿತು.
ಗುರುವಾರ ಮಕರಾರೂಢಾ ಸ್ಕಂದಮಾತ ಅಲಂಕಾರ ಪೂಜೆ, ಶ್ರೀ ಲಲಿತಾ ಮೂಲಮಂತ್ರ ಹೋಮ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಕರ್ನಾಟಕ ಶಾಸೀಯ ಸಂಗೀತ ಮತ್ತು ಸಂಜೆ ವೀಣಾ ವಾದನ ನಡೆಯಲಿದೆ.