ಸತ್ಯಸಾಯಿ ಆಸ್ಪತ್ರೆಯಲ್ಲಿ ಎಂಆರ್‌ಐ ಘಟಕ ಕಾರ್ಯಾರಂಭ, ಜನರಿಗೆ ಉತ್ತಮ ಆರೋಗ್ಯ ಸೇವೆ

10-3.jpg
Published on

ಚಿಕ್ಕಬಳ್ಳಾಪುರ: ಕಾಯಕ ದಾಸೋಹದ ಸಾಕಾರ ರೂಪವೇ ನೈಜ ಸೇವೆ ಎಂದು ವೈದ್ಯಕಿಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಆರ್.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.  
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಲ್ಲಿನ ಶ್ರೀ ಮಧುಸೂದನ ಸಾಯಿ ವೈದ್ಯಕಿಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಎಂಆರ್‌ಐ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯಕೀಯ, ವಿದ್ಯೆ ಮತ್ತು ಪೌಷ್ಟಿಕತೆಯು ಅತ್ಯಗತ್ಯ. ಇದನ್ನರಿತು ಸದ್ಗುರು ಶ್ರೀ ಮಧುಸೂದನ ಸಾಯಿ ಜಾಗತಿಕವಾಗಿ ಉಚಿತ ಸೇವೆ ಒದಗಿಸುತ್ತಿದ್ದಾರೆ. ವಾಸ್ತವವಾಗಿ ಸರ್ಕಾರದ ಹೊಣೆಯನ್ನು ಅವರೇ ನಿಭಾಯಿಸುತ್ತ ಮಾದರಿಯಾಗಿದ್ದಾರೆ ಎಂದರು.
ಸರ್ಕಾರವು ಜಿಲ್ಲೆಗೊಂದು ವೈದ್ಯಕಿಯ ಕಾಲೇಜು ಮತ್ತು ಅತ್ಯಾಧುನಿಕ ಸೇವಾ ಸೌಲಭ್ಯದ ಆಸ್ಪತ್ರೆಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ. ಇದರ ಮೂಲಕ ದುಬಾರಿ ವೆಚ್ಚದ ವೈದ್ಯಕಿಯ ಸೇವಾ ಸೌಲಭ್ಯಗಳು ಗ್ರಾಮೀಣ ಪ್ರದೇಶದ ಜನರಿಗೆ ಸುಲಭವಾಗಿ ದೊರಕಿಸಿಕೊಡಲು ಆದ್ಯತೆ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಮಧುಸೂಧನ ಸಾಯಿ, ಸತ್ಯಸಾಯಿ ಲೋಕ ಸೇವಾ ಶಿಕ್ಷಣ ಸಮೂಹಗಳ ಪ್ರಧಾನ ಮಾರ್ಗದರ್ಶಕ ಶ್ರೀ ಬಿ.ಎನ್.ನರಸಿಂಹಮೂರ್ತಿ, ಮಧುಸೂದನ ಸಾಯಿ ವೈದ್ಯಕಿಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎ.ಆರ್.ರಘುಪತಿ, ಇನ್ಪೋಸಿಸ್ ಪ್ರತಿಷ್ಠಾನದ ಟ್ರಸ್ಟಿ ಸುನೀಲ್ ಕುಮಾರ್ ದಾರೇಶ್ವರ್ ಮತ್ತಿತರರು ಇದ್ದರು.


*ಉಚಿತ ಸೇವಾ ಯೋಜನೆ
ಮಧುಸೂದನ ಸಾಯಿ ವೈದ್ಯಕಿಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಇನ್ಫೋಸಿಸ್ ಪ್ರತಿಷ್ಠಾನವು ಒದಗಿಸಿದ 'ಎಂಆರ್‌ಐ' ಉಪಕರಣ ಮತ್ತು ಅತ್ಯುನ್ನತ ಸೇವಾ ಸೌಲಭ್ಯಗಳ ವಿಸ್ತರಣಾ ಘಟಕವನ್ನು ಲೋಕಾರ್ಪಣೆಗೊಳಿಸಲಾಯಿತು. ಇದರೊಂದಿಗೆ ದುಬಾರಿ ವೆಚ್ಚದ ಸೇವೆಯೂ ಜನರಿಗೆ ಉಚಿತವಾಗಿ ಸಿಗಲಿದೆ. ಇದರ ಬಗ್ಗೆ ಮಧುಸೂದನ ಸಾಯಿ ವೈದ್ಯಕಿಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಶಿಕ್ಷಣ ಮತ್ತು ಗುಣಮಟ್ಟ ಸುಧಾರಣಾ ವಿಭಾಗದ ನಿರ್ದೇಶಕ ಡಾ. ಸತೀಶ್ ಬಾಬು ಮಾಹಿತಿ ನೀಡಿ, ವೈದ್ಯಕಿಯ ಸಂಸ್ಥೆಯ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ತಿಳಿಸಿದರು.
   
*ಆರೋಗ್ಯ ಪ್ರಾತ್ಯಕ್ಷಿಕೆ
ಸೇವಾ ಕ್ಷೇತ್ರದಲ್ಲಿ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಸಹಯೋಗಿ ಸಂಸ್ಥೆಗಳೊAದಿಗೆ ಸೇರಿಕೊಂಡು ನಿರ್ವಹಿಸಿದ ಜಾಗತಿಕ ಕಾರ್ಯಗಳ ಪಕ್ಷಿ ನೋಟದ ಪ್ರಾತ್ಯಕ್ಷಿಕೆಗಳ ಮೂಲಕ ಪ್ರಸ್ತುತಪಡಿಸಲಾಯಿತು. ಅತ್ಯಾಧುನಿಕ ಸಲಕರಣೆಗಳಿಂದ ಆರೋಗ್ಯ ಭಾಗ್ಯ ಪಡೆದ ಫಲಾನುಭವಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net