

ಮಡಿಕೇರಿ:
ಗುಡ್ಡಗಾಡು ಪ್ರದೇಶವಾದ ಕೊಡಗಿಗೆ ತೀರಾ ಅಗತ್ಯವಾಗಿದ್ದ ಎಂಆರ್‌ಐ ಸ್ಕಾö್ಯನಿಂಗ್ ಘಟಕವನ್ನು ಸರ್ಕಾರದ ವತಿಯಿಂದ ಮಡಿಕೇರಿಗೆ ಒದಗಿಸಲಾಗಿದ್ದು, ಇದರ ಸದುಪಯೋಗ ಆಗುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ವೈದ್ಯರ ಮೇಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಹೇಳಿದರು. ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕಾö್ಯನಿಂಗ್ ಘಟಕಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಕೊಡಗಿಗೆ ಎಂಆರ್‌ಐ ಘಟಕದ ಅಗತ್ಯತೆಯನ್ನು ಮನಗಂಡಿದ್ದ ಇಲ್ಲಿನ ಶಾಸಕರು ಸರ್ಕಾರದ ಗಮನ ಸೆಳೆದು ಈ ಸೇವೆ ಲಭ್ಯವಾಗುವಂತೆ ಮಾಡಿದ್ದಾರೆ. ಆರೋಗ್ಯ ಸೇವೆ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗಾಗಿ ಇಬ್ಬರು ಶಾಸಕರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಇವರ ಬೆನ್ನಿಗೆ ನಿಂತಿದೆ. ಇಲ್ಲಿನ ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣವಾಗಲು ಇನ್ನೂ 60 ಕೋಟಿ ರೂ. ಅಗತ್ಯವಿದೆ. ಈ ಸಂಬAಧ ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳಿಸಲಾಗಿದೆ. ಮಡಿಕೇರಿಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಡಿಯಾಲಜಿ ವಿಭಾಗ ಆರಂಭ ಮಾಡಲಾಗುವುದು. ಆಸ್ಪತ್ರೆಗೆ ಅಗತ್ಯವಿರುವ ತಜ್ಞರು, ಸಿಬ್ಬಂದಿ, ತಂತ್ರಜ್ಞರ ನೇಮಕ ಮಾಡಲಾಗುವುದು. ಕೊಡಗು ಸೇರಿದಂತೆ ಕಾರವಾರ ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಬರಲು ಯಾರೂ ಒಪ್ಪುವುದಿಲ್ಲ. ಆದರೂ ಸರ್ಕಾರ ಶ್ರಮವಹಿಸಿ ನೇಮಕಾತಿಗೆ ಕ್ರಮ ತೆಗೆದುಕೊಂಡಿದೆ. ಮಡಿಕೇರಿ ಬೋಧಕ ಆಸ್ಪತ್ರೆಗೆ ಅಗತ್ಯವಿರುವ ಎಲ್ಲಾ ಸವಲತ್ತು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಸರ್ಕಾರ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವ ಮೂಲಕ ಸ್ಥಳೀಯರಿಗೆ ಗುಣಮಟ್ಟದ ಚಿಕಿತ್ಸೆ ಕೊಡುವ ಸಂಕಲ್ಪವನ್ನು ಸರ್ಕಾರ ಮಾಡಿದೆ. ರಾಜ್ಯದಲ್ಲಿ 21 ಸರ್ಕಾರಿ ಮೆಡಿಕಲ್ ಕಾಲೇಜುಗಳು ಇದೆ. ಬಡವರು, ಪ್ರತಿಭಾವಂತರು ವೈದ್ಯರಾಗಬೇಕು ಎನ್ನುವುದೇ ಸರ್ಕಾರದ ಆಶಯ. ಬಡವರಿಗೂ ಉನ್ನತ ಚಿಕಿತ್ಸೆಗಳು ಕೈಗೆಟುಕಲಿ ಎನ್ನುವ ಕಾರಣಕ್ಕೆ ಸರ್ಕಾರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಸೆಂಟರ್ ಆರಂಭ ಮಾಡಿದೆ. ಈ ಮೂಲಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಕೆಲಸಗಳು ಆಗುತ್ತಿದೆ ಎಂದರು.
ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಕೊಡಗು ಜಿಲ್ಲೆಯ ಮೊದಲ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ಬಂದಿದೆ. ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಉತ್ತೇಜನ, ಪ್ರೋತ್ಸಾಹ ಕೊಡುತ್ತಿದೆ. ಈ ಸಂಬAಧ ನೀತಿ ರೂಪಿಸುತ್ತಿದೆ. ಬಜೆಟ್‌ನಲ್ಲೂ ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಮೊತ್ತ ಮೀಸಲಿಡಲು ತೀರ್ಮಾನ ತೆಗೆದುಕೊಂಡಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಹೆಚ್ಚಿನ ಪ್ರಗತಿ ನಿರೀಕ್ಷೆ ಮಾಡಬಹುದಾಗಿದೆ ಎಂದು ಹೇಳಿದರು.
ರೇಡಿಯಾಲಜಿ ತಜ್ಞರೂ ಆಗಿರುವ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ ಎಂಆರ್‌ಐ ಸ್ಕಾö್ಯನಿಂಗ್ ರೇಡಿಯೇಷನ್ ರಹಿತ ಸ್ಕ್ಯಾನಿಂಗ್ ಆಗಿದ್ದು, ಸಂಪೂರ್ಣ ಸುರಕ್ಷಿತವಾಗಿದೆ. ಇರುವ ಅವಕಾಶದಲ್ಲಿ ಸಾರ್ವಜನಿಕ ಕೆಲಸ ಮಾಡುವ ಗುರಿ ಇಟ್ಟುಕೊಳ್ಳಲಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ. ಎಂಆರ್‌ಐ ಘಟಕಕ್ಕೆ ಇಬ್ಬರು ತಂತ್ರಜ್ಞರ ಅಗತ್ಯವಿದೆ. ಆಸ್ಪತ್ರೆಗೆ ಜಾಗ ದಾನ ಮಾಡಿದ ಕೊರವಂಡ ತಿಮ್ಮಯ್ಯ ಅವರಿಗೆ ಗೌರವ ಸಿಗುವ ಕೆಲಸ ಆಗಬೇಕು. ಹಾಗಾಗಿ ಅವರ ನೆನಪನ್ನು ಆಸ್ಪತ್ರೆಯಲ್ಲಿ ಶಾಶ್ವತಗೊಳಿಸುವ ಪ್ರಯತ್ನ ನಡೆಯಬೇಕು. ಕಾರ್ಡಿಯೋಲಜಿ ಕೇಂದ್ರ ಆದಷ್ಟು ಬೇಗ ಆಗಲಿ. ಇದಕ್ಕೆ ಸಚಿವರ ಸಹಕಾರ ಬೇಕು. ಎಂಆರ್‌ಐ ಘಟಕದ ಹೆಚ್ಚಿನ ಉಪಯೋಗ ಆಗಬೇಕು. ವಿದ್ಯಾರ್ಥಿಗಳಿಗೂ ಅವಕಾಶ ಮಾಡಿಕೊಡಬೇಕು ಎಂದರು.
ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ನಿರ್ದೇಶಕ ಮಹಮ್ಮದ್ ಮೊಹಿಸಿನ್ ಮಾತನಾಡಿ, ಮಡಿಕೇರಿಯಲ್ಲಿ ಕ್ರಿಟಿಕಲ್‌ಕೇರ್ ಸೆಂಟರ್ ಕೆಲಸ ಆಗುತ್ತಿದೆ. ಇದಕ್ಕೆ ಕಾನೂನು ತೊಡಕು ಇದ್ದು, ಸದ್ಯದಲ್ಲೇ ಎಲ್ಲವೂ ಪರಿಹಾರ ಆಗುವ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ ಇಲಾಖೆಯ ವಾರ್ಷಿಕ ಗುರಿಮುಟ್ಟಲಾಗಿದೆ. ಹಾಗಾಗಿ ಹೆಚ್ಚಿನ ಅನುದಾನ ಕೊಡಿಸುವಲ್ಲಿ ಶಾಸಕರು ಸಹಕರಿಸಬೇಕು ಎಂದರು.
ಸರ್ಕಾರದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಕೊಡಗು ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ. ವಿಶಾಲ್ ಕುಮಾರ್, ಎಡಿಸಿ ಐಶ್ವರ್ಯ ವೇದಿಕೆಯಲ್ಲಿ ಇದ್ದರು.