ಎಂ.ಆರ್‌ಸ್ವಾಮಿ ನ್ಯಾಯಾಂಗ ಬಂಧನ ಮುಂದುವರಿಕೆ

Mng_MR-Swamy
Published on

ಮಂಗಳೂರು: ಗುತ್ತಿಗೆದಾರರೋರ್ವರಿಂದ 15 ಸಾವಿರ ರೂ. ಲಂಚ ಪಡೆದ ಆಪಾದನೆಯಡಿ ಪ್ರಸ್ತುತ ನ್ಯಾಯಾಂಗ ವಶದಲ್ಲಿರುವ ಮೂಲ್ಕಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಜಾಮೀನು ಅರ್ಜಿ ವಜಾಗೊಂಡಿದ್ದು, ನ್ಯಾಯಾಂಗ ಬಂಧನ ಮುಂದುವರಿದಿದೆ.

ಕಾಮಗಾರಿ ಬಿಲ್ ಪಾಸ್ ಮಾಡಲು ಸೆ.19ರಂದು ಗುತ್ತಿಗೆದಾರರೋರ್ವರಿಂದ 15 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಎಂ.ಆರ್.ಸ್ವಾಮಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದ. ಅದೇ ದಿನ ಸ್ವಾಮಿಯ ಮನೆ ಶೋಧನೆ ಮಾಡಿದಾಗ ವಿದ್ಯುತ್ ಗುತ್ತಿಗೆದಾರರೊಬ್ಬರ ಸಂಸ್ಥೆಯ ಹೆಸರಿರುವ ಕವರ್‌ನಲ್ಲಿ 30 ಸಾವಿರ ರೂ. ಪತ್ತೆಯಾಗಿದೆ. ಈ ಬಗ್ಗೆ ತನಿಖೆ ನಡೆಸಿದಾಗ 3 ವಿದ್ಯುತ್ ಕಾಮಗಾರಿಗಳ ಬಿಲ್ ಪಾಸ್ ಮಾಡುವುದಕ್ಕೆ ಎಂ.ಆರ್.ಸ್ವಾಮಿ ಹಣ ಪಡೆದಿರುವುದು ಗಮನಕ್ಕೆ ಬಂದಿತ್ತು.

ಅದೇ ದಿನ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಜೂನಿಯರ್ ಇಂಜಿನಿಯರ್ ನಾಗರಾಜು ಕೂಡ 30 ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದ. ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅ.3ರ ತನಕ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಅ.3ರಂದು ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಂಧ್ಯಾ ಎಸ್.ವಿಚಾರಣೆ ನಡೆಸಿ, ಇಬ್ಬರು ಆರೋಪಿಗಳಿಗೆ ಜಾಮೀನು ನಿರಾಕರಿಸಿದ್ದಾರೆ. ಲೋಕಾಯುಕ್ತದ ಪರ ಸರ್ಕಾರಿ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ ವಾದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net