

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಎಲ್ಲ ನೆಲೆ-ಮೂಲಗಳ ಸಂಪೂರ್ಣ ಗುರುತ್ವಾಧಿಕಾರವನ್ನು ತಮಗೆ ಧಾರೆ ಎರೆದಿರುವ ಗುರುಗಳಾದ ಶಾಂತಲಿಂಗ ಶಿವಾಚಾರ್ಯ ಶ್ರೀಗಳು ಮುಕ್ತ ಮನದ ಮೇರು ಹೃದಯಿಯಾಗಿದ್ದಾರೆ ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದರು.
ಅಮ್ಮಿನಬಾವಿ ಗ್ರಾಮದ ಪಂಚಗೃಹ ಹಿರೇಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಹಿರಿಯ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ 91ನೇ ವರ್ಧಂತಿ ಮಹೋತ್ಸವ ಹಾಗೂ ತುಲಾಭಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಸರಿಗೆ ಮಾತ್ರ ಉತ್ತರಾಧಿಕಾರಿ ಮಾಡಿಕೊಂಡು ಯಾವ ಅಧಿಕಾರವನ್ನೂ ಬಿಟ್ಟುಕೊಡದೆ ಎಲ್ಲವನ್ನೂ ತಮ್ಮ ಬಳಿಯೇ ಇಟ್ಟುಕೊಂಡು ದ್ವಂದ್ವಗಳ ಸಂಕೀರ್ಣತೆಯಲ್ಲಿರುವ ಮಠಗಳನ್ನು ಕಂಡಿದ್ದೇವೆ. ಆದರೆ ಶಾಂತಲಿಂಗ ಶಿವಾಚಾರ್ಯರು ಮಠದ ಜವಾಬ್ದಾರಿ ಒಪ್ಪಿಸಿ ಮುಕ್ತರಾಗಿದ್ದಾರೆ ಎಂದರು.
ತುಲಾಭಾರ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಜನ್ಮ ನೀಡಿದ ತಂದೆ-ತಾಯಿ ಹಾಗೂ ಧರ್ಮ ದೀಕ್ಷೆ ನೀಡಿದ ಗುರುವಿನ ಋಣ ತೀರಿಸಲು ಎಲ್ಲರೂ ಸಂಕಲ್ಪಿಸಬೇಕು. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ ಸಾಕ್ಷಾತ್ ಭಗವತ್ ಸ್ವರೂಪವೇ ಆಗಿರುವ ಗುರುವಿನ ಸೇವೆಗೆ ಸರ್ಮಪಿಸಿಕೊಂಡಾಗ ಮೋಕ್ಷ ಮಾರ್ಗ ಕಾಣಸಿಗುತ್ತದೆ ಎಂದರು.
ಸಕ್ಕರೆ, ಬೆಲ್ಲ, ಅಕ್ಕಿ, ರವೆ, ತೆಂಗಿನಕಾಯಿ ಮತ್ತು ನಾಣ್ಯಗಳಿಂದ ತುಲಾಭಾರ ಸೇವೆಗಳನ್ನು ಸಲ್ಲಿಸಿದ ಗುರುಮೂರ್ತಿ ಯರಗಂಬಳಿಮಠ, ಶೋಭಾ ಯರಗಂಬಳಿಮಠ, ಪ್ರೇಮಾ ರುದ್ರಾಪುರ, ಬಿ.ಸಿ.ಕೊಳ್ಳಿ, ಗುರುಬಸವರಾಜ ಮತ್ತೂರಮಠ, ಪವನಕುಮಾರ ಮಲ್ಲಿಕಾರ್ಜುನ ಕುಸುಗಲ್ಲ, ಸುನೀಲ ಗುಡಿ, ರಾಮಣ್ಣ ಜಕ್ಕಣ್ಣವರ, ಬಸಪ್ಪ ಉಗರಗೋಳ, ಅಶೋಕ ಗುಡಿ, ದೀಪಕ ಗೊಡಚಿ ಹಾಗೂ ಅಕ್ಕಮಹಾದೇವಿ ಯರಗಂಬಳಿಮಠ ಅವರನ್ನು ಶ್ರೀಗಳು ಆಶೀರ್ವದಿಸಿದರು.
ವಿನಾಯಕ ಹಿರೇಮಠ ವಂದಿಸಿದರು.