

ಹಾಸನ: ಕನ್ನಡ ಸಿನಿಮಾ ರಂಗದಲ್ಲೆ ಮೊದಲ ಬಾರಿಗೆ 180 ಜನ ಬಂಡವಾಳ ಹಾಕಿ ನಿರ್ಮಾಣ ಮಾಡಿರುವ ಮಿಸ್ಟರ್ ರಾಣಿ ಕನ್ನಡ ಚಲನಚಿತ್ರವು ಫೆಬ್ರವರಿ 7ರಂದು ರಾಜ್ಯಾದ್ಯಂತ 200 ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿದೆ ಎಂದು ಚಿತ್ರದ ನಾಯಕ ನಟ ದೀಪಕ್ ಸುಬ್ರಮಣ್ಯ ತಿಳಿಸಿದರು.
ಮಿಸ್ಟರ್ ರಾಣಿ ಈ ಚಿತ್ರದಲ್ಲಿ ನಾನು ನಾಯಕ ನಟನಾಗಿ ಮುಖ್ಯ ಭೂಮಿಕೆಯಲ್ಲಿದ್ದೇನೆ. ಸುಮಾರು 11 ಚಲನಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದು, ಪ್ರಸ್ತುತ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯ ಜಯಂತ್ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಕನ್ನಡ ಸಿನಿಮಾದಲ್ಲಿ ಮೊಟ್ಟ ಮೊದಲ ಬಾರಿಗೆ 180 ಜನರು ಸೇರಿ ಬಂಡವಾಳ ಹೂಡಿ ಈ ಸಿನಿಮಾ ಮಾಡಿದ್ದಾರೆ. ಇದೊಂದು ಕ್ರೌಡ್ ಫಂಡೆಡ್ ಸಿನಿಮಾ ಆಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಾಯಕಿಯಾಗಿ ಬಹುಭಾಷಾ ನಟಿ ಪಾರ್ವತಿ ನಾಯರ್ ಅಭಿನಯಿಸಿದ್ದಾರೆ. ಮುಖ್ಯ ಪಾತ್ರಗಳಲ್ಲಿ ಲಕ್ಷ್ಮೀ ಕಾರಂತ್, ಶ್ರೀವತ್ಸ, ಮಧುಚಂದ್ರ, ಆನಂದ್ ನಿನಾಸಂ ಅಭಿನಯಿಸಿದ್ದಾರೆ. ಸಿನಿಮಾವನ್ನು ಸುಮಾರು 80 ದಿನಗಳ ಕಾಲ ಕರ್ನಾಟಕದಲ್ಲಿಯೇ ಚಿತ್ರೀಕರಿಸಲಾಗಿದೆ. ಈ ಸಿನಿಮಾವನ್ನು ಮೊದಲೇ 2000 ಸಾವಿ ಮಂದಿ ವೀಕ್ಷಿಸಿದ್ದು, ಅವರೆಲ್ಲರ ಅಭಿಪ್ರಾಯವನ್ನು ಕಲೆಹಾಕಿ ಸಿನಿಮಾವನ್ನು ಮತ್ತಷ್ಟು ವಿಭಿನ್ನ ರೀತಿಯಲ್ಲಿ ಗಟ್ಟಿಗೊಳ್ಳಿಸಲಾಗಿದೆ ಎಂದರು.
ಮಿಸ್ಟರ್ ರಾಣಿ ಚಲನಚಿತ್ರದ ನಿರ್ದೇಶಕ ಮಧುಚಂದ್ರ ಮಾತನಾಡಿ, ಇದೊಂದು ಕಾಮಿಡಿ ಚಲನಚಿತ್ರವಾಗಿದ್ದು, ಕುಟುಂಬ ಸಮೇತ ನೋಡುವ ಚಿತ್ರವಾಗಿದೆ. ಸಂಗೀತ ಸಂಯೋಜನೆ ಹಾಗೂ ಹಿನ್ನಲೆ ಸಂಗೀತವನ್ನು ಜೂಡಿ ಸ್ಯಾಂಡಿ ಮತ್ತು ಋಥ್ವಿಕ್ ಮುರಳೀಧರ್ ಮಾಡಿದ್ದಾರೆ. ಕ್ಯಾಮರಾಮೆನ್ ಆಗಿ ರವೀಂದ್ರನಾಥ್, ಕಲೆ ವಿಭಾಗದಲ್ಲಿ ಉಲ್ಲಾಸ್ ಹೈದರ್, ಸ್ಮಿತಾ ಕುಲಕರ್ಣಿ, ವಸ್ತ್ರ ವಿನ್ಯಾಸ ಶಿಲ್ಪಾ ಹೆಗ್ಡೆ ಹಾಗೂ ಇನ್ನು ಹಲವಾರು ತಂತ್ರಜ್ಞರು ಸೇರಿ ಸಿನಿಮಾವನ್ನು ತೆರೆಗೆ ತಂದಿದ್ದಾರೆ. ಎಲ್ಲರೂ ಕನ್ನಡ ಸಿನಿಮಾವನ್ನು ಚಿತ್ರಮಂದಿರದಲ್ಲೇ ಬಂದು ವೀಕ್ಷಣೆ ಮಾಡುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಚಂದ್ರಕಾಂತ್, ಸಹಾಯಕ ನಿರ್ದೇಶಕ ಸಿದ್ಧು ಇತರರು ಉಪಸ್ಥಿತರಿದ್ದರು.