

-ಬೆಳಗಾವಿ ಮಾಳಮಾರುತಿ ಠಾಣೆಯಲ್ಲಿ ವಿಶೇಷ ಪೂಜೆ ವಿಜಯವಾಣಿ ಸುದ್ದಿಜಾಲ ಬೆಳಗಾವಿ ಮಹಾನಗರದಲ್ಲಿರಗ ಹೆಚ್ಚುತ್ತಿರುವ ಕೊಲೆ, ಸುಲಿಗೆ ಪ್ರಕರಣಗಳ ನಿಯಂತ್ರಣಕ್ಕೆ, ಜನರಲ್ಲಿ ಉಂಟಾಗಿರುವ ಭಯ ದೂರ ಮಾಡಲು ಪೊಲೀಸರು ಹೋಮ ಹವನ ಮೊರೆ ಹೋಗಿದ್ದಾರೆ. ಮತ್ತೊಂದೆಡೆ ಪೊಲೀಸರು ತಮ್ಮ ವೈಫಲ್ಯ, ಅಕ್ರಮ ವ್ಯವಹಾರಗಳನ್ನು ಮುಚ್ಚಿ ಹಾಕಿಕೊಳ್ಳಲು ಹೋಮ ಹವನ, ಮಾಟ ಮಂತ್ರದ ಹೆಸರಿನಲ್ಲಿ ದಾರಿ ತಪ್ಪಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಗಡಿ ಜಿಲ್ಲೆ ಬೆಳಗಾವಿ ನಗರದಲ್ಲಿ ನವಂಬರ್‌ನಲ್ಲಿ ಹೆಚ್ಚು ಅಪರಾಧ ಪ್ರಕರಣಗಳು ವರದಿಯಾಗಿದ್ದು, ತಲ್ಲಣ ಮೂಡಿಸಿದೆ. ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಷ್ಟೇ ಹೆಚ್ಚು ಕೃತ್ಯಗಳು ಜರುಗುತ್ತಿವೆ. ಹಣಕಾಸಿನ ವಿಚಾರ, ಅಕ್ರಮ ಸಂಬಂಧ, ಪ್ರೀತಿ ಪ್ರೇಮ ಸೇರಿ ಕ್ಷುಲ್ಲಕ ಕಾರಣಗಳಿಗೆ ನಗರದಲ್ಲಿ ನೆತ್ತರು ಹರಿಯುತ್ತಿದ್ದು, ಜನರಲ್ಲಿ ಆತಂಕ ನೆಲೆಯೂರಿದೆ. ಕೆಲಸಕ್ಕೆ ಹೋದ ವ್ಯಕ್ತಿ ರಾತ್ರಿ ಮನೆ ತಲುಪುವುದು ತಡವಾದರೆ ಕುಟುಂಬದವರು ಆತಂಕ ಪಡುವಂತಾಗಿದೆ. ರಾತ್ರಿ ಸಮಯದಲ್ಲಿ ಒಂಟಿಯಾಗಿ ಓಡಾಡದಂತಹ ವಾತಾವರಣ ಸೃಷ್ಟಿಯಾಗಿದೆ. ಮಾಳಮಾರತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆಂಜನೇಯ ನಗರದ ಉದ್ಯಮಿ ಸಂತೋಷ ಪದ್ಮಣ್ಣವರ ಕೊಲೆ, ವಡ್ಡರವಾಡಿಯ ವಿವಾಹಿತ ಮಹಿಳೆಯ ಮತ್ತು ಆಕೆಯ ತಾಯಿಯನ್ನು ಸಾರ್ವಜನಿಕವಾಗಿ ಬಟ್ಟೆ ಹರಿದು ಹಲ್ಲೆ, ಕೆಪಿಟಿಸಿಎಲ್ ಸಭಾಂಗಣದ ಬಳಿ ಪೋಟೋಗ್ರಾಫರ್ ಅಪಹರಣ, ಪ್ರಣೀತ್ ಎಂಬ ಯುವಕನ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ, ಮನೆಗಳ ಕಳ್ಳತನ ಸೇರಿ ಒಂದೇ ತಿಂಗಳಿನಲ್ಲಿ 30ಕ್ಕೂ ಅಧಿಕ ಪ್ರಕರಣಗಳು ನಡೆದಿವೆ. ಈ ಎಲ್ಲ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳಲು ಮಾಳಮಾರುತಿ ಠಾಣೆಯಲ್ಲಿ ಗುರುವಾರ ಹೋವ ಹವನ ಮಾಡಿಸಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಅಲ್ಲದೆ, ಪೊಲೀಸರ ವಿರುದ್ಧವೇ ಜನರು ತಿರುಗಿಬಿದ್ದಿದ್ದಾರೆ. ಅಪರಾಧ ಪ್ರಕರಣಗಳ ಮೇಲೆ ಕಣ್ಣಿಡಲು ಹೆಚ್ಚಿನ ಪೊಲೀಸರ ಅಗತ್ಯವಿದೆ.ಆದರೆ, ವಾಸ್ತವವಾಗಿ ಅಗತ್ಯ ಸಿಬ್ಬಂದಿ ಇಲ್ಲದಿರುವುದರಿಂದ ಅಪರಾಧ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ಹೆಣಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಿದರೂ ಒತ್ತಡ ತಪ್ಪುತ್ತಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳ ಆಜ್ಞೆ ಪಾಲಿಸಬೇಕಾಗಿದ ಅನಿವಾರ್ಯತೆ. ಸಿಸಿ ಟಿವಿಗಳನ್ನು ಅಳವಡಿಸಿದರು, ವಿಶೇಷ ತಂಡಗಳನ್ನು ರಚನೆ ಮಾಡಿದರು ಅಪರಾಧ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿರಲ್ಲ ಎಂಬ ಕೊರಗು ಪೊಲೀಸರನ್ನು ಕಾಡುತ್ತಿದೆ.