ಸದೃಢ ಸಮಾಜ ನಿರ್ಮಿಸುವಲ್ಲಿ ಸ್ವಾಮೀಜಿಗಳ ಪಾತ್ರ ದೊಡ್ಡದಿದೆ: ಜಗದೀಶ ಶೆಟ್ಟರ ಅಭಿಮತ

20240720_094049.jpg
Published on

ಬೆಳಗಾವಿ: ಸದೃಢ ಸಮಾಜ ನಿರ್ಮಿಸುವಲ್ಲಿ ಮಠ ಮಂದಿರ, ಸ್ವಾಮೀಜಿಗಳ ಪಾತ್ರ ದೊಡ್ಡದಿದೆ ಎಂದು ಸಂಸದ ಜಗದೀಶ ಶೆಟ್ಟರ್ ಅಭಿಮತ ವ್ಯಕ್ತಪಡಿಸಿದರು.

ಶನಿವಾರ ನಗರದ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖಾ ಮಠಕ್ಕೆ ಗುರು ಪೂರ್ಣಿಮೆಯ ನಿಮಿತ್ತ ಮುನ್ನಾದಿನ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದ ಪಡೆದು ಅವರು ಮಾತನಾಡಿದರು.

ಹುಕ್ಕೇರಿ ಹಿರೇಮಠದ ಶ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಎಲ್ಲ ಸಮುದಾಯದವರನ್ನು ಸಮಾನವಾಗಿ ನೋಡುವ ಶ್ರೀಗಳು. ಗುರು ಎಂದತರ ಭಂಡಾರ, ಗುರು ಎಂದರೆ ಜ್ಞಾನ ಭಂಡಾರ, ಜ್ಞಾನ ದೇಗುಲ, ನ್ಯಾಯ ನಿಷ್ಠರು. ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಸನಾತನ ಧರ್ಮದ ಸ್ವಾಮೀಜಿಗಳ ಪಾತ್ರ ದೊಡ್ಡದಿದೆ ಎಂದರು.

ಹುಕ್ಕೇರಿಯ ಗುರುಶಾಂತೇಶ್ವರ ಸಂಸ್ಥಾನದ ಹಿರೇಮಠ ಉತ್ತರ ಕರ್ನಾಟಕದಲ್ಲಿಯೇ ಅಪರೂಪದ ಕಾರ್ಯ ಮಾಡುತ್ತಿದೆ. ಕರ್ನಾಟಕದಲ್ಲಿ ಅಷ್ಟೆ ಅಲ್ಲದೆ ಬೇರೆ ಬೇರೆ ರಾಜ್ಯದಲ್ಲಿ ಶ್ರೀಗಳ ಹೆಸರಿದೆ. ಗುರುಪೂರ್ಣಿಮೆಯ ಪರ್ವಕಾಲದಲ್ಲಿ ಶ್ರೀಗಳಿಂದ ಆಶೀರ್ವಾದ ಪಡೆದಿರುವುದು ನನ್ನ ಪೂರ್ವ ಜನ್ಮದ ಪುಣ್ಯ‌.‌ ನಾವೆಲ್ಲರೂ ಕೂಡ ಗುರುಗಳ ಬಗ್ಗೆ ಶೃದ್ಧೆ ಇಡುತ್ತ ಅವರ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದರು.

ಬೆಳಗಾವಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗುರುವನ್ನು ಗೌರವಿಸಬೇಕು. ಗುರುವನ್ನು ಗೌರವಿಸಿದಾಗ ಮಾತ್ರ ಶಿಷ್ಯನ ಬದುಕು ಬಂಗಾರವಾಗುತ್ತದೆ. ಗುರುವಿಗೆ ನೋವಾಗದಂತೆ ನಡೆದುಕೊಳ್ಳುವವನೇ ನಿಜವಾದ ಶಿಷ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಗುರುಗಳ ಆಶೀರ್ವಾದ ಪಡೆಯುತ್ತ ಜೀವನದಲ್ಲಿ ಮುಂದೆ ಬರಬೇಕು ಎಂದರು.

ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಲೋಕಸಭಾ ಮತಕ್ಷೇತ್ರದ ಸಂಸದರಾಗಿ ಈ ಭಾಗದ ಜನರಿಗೆ ಅನುಕೂಲವಾಗುವ ಕಾರ್ಯವನ್ನು ಹೆಚ್ಚಾಗಿ ಮಾಡಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮುಕ್ತಾರ್ ಹುಸೇನ್ ಪಠಾಣ, ಚೇತನ ಅಂಗಡಿ, ಚಂದ್ರಶೇಖರಯ್ಯ ಸವಡಿಸಾಲಿಮಠ, ವೀರುಪಾಕ್ಷಯ್ಯ ನೀರಲಗಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net