

ಚಾಮರಾಜನಗರ: ಸಂಸದ ಶ್ರೀನಿವಾಸ್ ಪ್ರಸಾದ್ ಹುಟ್ಟು ಹಬ್ಬದ ಅಂಗವಾಗಿ ಆಶ್ರಮ ಶಾಲೆ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಇನ್ನಿತರೆ ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.
ನಗರದ ದೀನಬಂಧು ಆಶ್ರಮ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಿ ಪರಿಸರ ಪ್ರೇಮಿ ವೆಂಕಟೇಶ್ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡಿರುವ ಪ್ರಸಾದ್, ನೇರ ನಡೆ-ದಿಟ್ಟ ನುಡಿಯ ಸಾಮಾಜಿಕ ಬದ್ಧತೆಯ ವ್ಯಕ್ತಿ ಹಾಗೂ ಸಮಾಜದ ಅಸಮಾನತೆ ಅಸ್ಪೃಶ್ಯತೆ ಅನ್ಯಾಯ ವಿರುದ್ಧ ಹೋರಾಟ ಮಾಡಿದ್ದಾರೆ. ಅವರ 77ನೇ ಹುಟ್ಟುಹಬ್ಬವನ್ನು ದಿನಬಂಧು ಆಶ್ರಮದ ಮಕ್ಕಳೊಂದಿಗೆ ಆಚರಿಸುತ್ತಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದರು.
ದೀನ ಬಂದು ಆಶ್ರಮದ ಪ್ರಭುಸ್ವಾಮಿ ಮಾತನಾಡಿ, ಸಂಸದರಾದ ವಿ.ಶ್ರೀನಿವಾಸ ಪ್ರಸಾದ್ ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ದೀನಬಂದು ಆಶ್ರಮಕ್ಕೆ ಅನುದಾನ ನೀಡಿ ಸಹಾಯ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಒಂದು ದಿನ ಆಶ್ರಮಕ್ಕೆ ಭೇಟಿ ನೀಡಿ ನಮ್ಮ ಮಕ್ಕಳ ಜತೆ ಇರಬೇಕು ಎಂದು ನಮ್ಮ ಮಕ್ಕಳು ಆಡಳಿತ ವರ್ಗದವರು ಆಸೆ ಪಟ್ಟಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಆಶ್ರಮದ ಮಕ್ಕಳಿಗೆ ಬೆಳಗಿನ ಉಪಹಾರ ಮತ್ತು ನೋಟ್ ಪುಸ್ತಕಗಳನ್ನು ಸ್ವಾಭಿಮಾನಿ ವಿ. ಶ್ರೀನಿವಾಸ್ ಪ್ರಸಾದ್ ಅಭಿಮಾನಿ ಬಳಗದ ಅಧ್ಯಕ್ಷ ರಾಮಸಮುದ್ರ ಬಸವರಾಜ್ ವಿತರಣೆ ಮಾಡಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಗೋಪಾಲ್, ಮಾಜಿ ಸದಸ್ಯ ಮಲ್ಲೇದೇವರು, ವೀರಶೈವ ಮುಖಂಡ ಆರ್.ಪುಟ್ಟಮಲ್ಲಪ್ಪ, ಉದ್ಯಮಿ ವೆಂಕಟೇಶ್, ಮಂಜುನಾಥ್, ಅಶೋಕ್ ಉಪಸ್ಥಿತರಿದ್ದರು.