

ಬೆಳಗಾವಿ:ಧರ್ಮಸ್ಥಳ ಶ್ರೀಕ್ಷೇತ್ರದ ಧಾರ್ಮಿಕ ನಂಬಿಕೆಗಳ ವಿರುದ್ಧ ಎಡಪಂತಿಯವರ ಅಪಪ್ರಚಾರಕ್ಕೆ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಅಲ್ಲದೆ, ಎಸ್‌ಐಟಿ ತನಿಖೆ ಹೆಸರಿನಲ್ಲಿ ಹಿಂದೂ ಧರ್ಮದ ವಿರುದ್ಧ ಷಡ್ಯಂತ ನಡೆಸುತ್ತಿದೆ ಎಂದು ಸಂಸದ ಜಗದೀಶ ಶೆಟ್ಟರ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿರುವುದಾಗಿ ಅನಾಮಿಕ ವ್ಯಕ್ತಿ ಹೇಳಿರುವ ಪ್ರಕರಣ ಸಂಬಂಧದ ಶೋಧ ಕಾರ್ಯಚರಣೆಗೆ ನಮ್ಮ ಅಭ್ಯಂತರವಿಲ್ಲ. ಆದರೆ, ಧರ್ಮಸ್ಥಳದ ಧಾರ್ಮಿಕ ನಂಬಿಕೆಗಳಿಗೆ ಅಪಪ್ರಚಾರ ಮಾಡುತ್ತಿರುವುದನ್ನು ಸಹಿಸುವುದಿಲ್ಲ. ಹಿಂದೂ ಧಾರ್ಮಿಕ ಆಚರಣೆಗಳ ವಿರುದ್ಧ ಎಡಪಂತಿಯವರು ನಿರಂತರ ಅಪಪ್ರಚಾರ ನಡೆಸುತ್ತಿರುವುದು ಖಂಡನೀಯ. ಸರ್ಕಾರ ಎಚ್ಚೆತ್ತುಕೊಂಡು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ಕಾರ್ಯನಿರ್ವಹಿಸಬೇಕು ಎಂದು ಆಗ್ರಹಿಸಿದರು.
ರಾಹುಲ ಗಾಂಧಿ ಅಪ್ರಬುದ್ಧ ನಾಯಕ:
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ ಗಾಂಧಿ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಗೆ ಅಪಮಾನ ಮಾಡುತ್ತಿದ್ದು, ಮತದಾನ ಕಳ್ಳತನ ಎಂದು ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ. ಚುನಾವಣೆಯಲ್ಲಿ ಅಕ್ರಮ ನಡೆದಿದ್ದರೆ ದೂರು ಕೊಡುವ ಬದಲು ಚುನಾವಣೆ ಆಯೋಗ ಕಾರ್ಯ ಚಟುವಟಿಕೆಗಳನ್ನು ಅಣಿಕಿಸುವ ಕೆಲಸ ಮಾಡುತ್ತಿದ್ದಾರೆ. ಆತನೊಬ್ಬ ಸಾಮಾನ್ಯ ಜ್ಞಾನ ಇಲ್ಲದೆ ಅಪ್ರಬುದ್ಧ ನಾಯಕನಾಗಿರುವುದರಿಂದ ಭಾರತೀಯರು ಆತನನ್ನು ಕಡೆಗಣಿಸಿದ್ದಾರೆ ಎಂದು ಟೀಕಿಸಿದರು.
ಲೋಕಸಭೆ ಚುನಾವಣೆಯಲ್ಲಿ ಮತಕಳ್ಳತನ ಆಗಿದ್ದರೆ ಸುಪ್ರೀಂ, ಹೈಕೋರ್ಟ್‌ಗೆ ಇಲ್ಲವೇ ಚುನಾವಣೆ ಆಯೋಗಕ್ಕೆ ದೂರು ಕೊಡಬೇಕು. ಅದೆಲ್ಲಬಿಟ್ಟು ಸುಳ್ಳು ದಾಖಲೆಗಳನ್ನು ಇಟ್ಟುಕೊಂಡು ಅಪ್ರಚಾರ ನಡೆಸುತ್ತಿರುವುದು ಸರಿಯಲ್ಲ. ತಮ್ಮ ದೂರುಗಳ ಕುರಿತು ಚುನಾವಣೆ ಆಯೋಗಕ್ಕೆ ಅಪಿಡೇವಿಟ್ ಸಲ್ಲಿಸಿ ತನಿಖೆ ಎದುರಿಸಬೇಕು.ಮೂರ್ಖತನ ಪರಮಾವಧಿ ಆಡಳಿತಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂಬುದನ್ನು ಕಾಂಗ್ರೆಸ್ ನಾಯಕರು ನೆನಪಿಸಿಕೊಳ್ಳಬೇಕು ಎಂದು ಹೇಳಿದರು.
ಮಾಜಿ ಸಂಸದೆ ಮಂಗಲ ಅಂಗಡಿ, ಪಾಲಿಕೆ ಸದಸ್ಯ ಹಣಮಂತ ಕೊಂಗಾಲಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ನಗರ ಘಟಕ ಅಧ್ಯಕ್ಷೆ ಗೀತಾ ಸುತಾರ ಇತರರಿದ್ದರು.