ಮೈಸೂರಿನ ತಾರಾಲಯ ವೀಕ್ಷಿಸಿದ ಸಂಸದ ಯದುವೀರ್

ದಕ್ಷಿಣ ಕರ್ನಾಟಕ ಅಂಚೆ ಕಚೇರಿ ಮೈಸೂರಿಗೆ ಸ್ಥಳಾಂತರ
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್South Karnataka Post Office Relocated to Mysuru
Published on: 

ಮೈಸೂರು: ನಗರದಲ್ಲಿ 115 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ವಿಶ್ವದರ್ಜೆಯ ತಾರಾಲಯವನ್ನು ನ.13ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಾರಾಲಯಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ತಾರಾಲಯ ಉದ್ಘಾಟಿಸುತ್ತಿರುವುದು ಸಂತಸದ ಸಂಗತಿ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 5 ಕೋಟಿ ರೂ. ಅನುದಾನ ಸೇರಿದಂತೆ ವಿಜ್ಞಾನ ಮತ್ತು ತಂತ್ರಜ್ಞಾನ, ಖಗೋಳ ವಿಜ್ಞಾನ ಹಾಗೂ ಸ್ವದೇಶಿ ದರ್ಶನ್ ಯೋಜನೆಗಳ ಅಡಿಯಲ್ಲಿ ತಾರಾಲಯ ನಿರ್ಮಿಸಲಾಗಿದೆ. ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ ಇದಕ್ಕೆ ಮಾರ್ಗದರ್ಶನ ನೀಡುತ್ತಿದೆ ಎಂದರು.

ವಿಶ್ವದಲ್ಲೇ ವಿಶೇಷವಾದ ಗುಮ್ಮಟಾಕಾರದ ಎಲ್‌ಇಡಿ ವ್ಯವಸ್ಥೆ ಹೊಂದಿರುವ ಪ್ರಥಮ ತಾರಾಲಯ ಇದಾಗಿದೆ. ಲಡಾಖ್ ಹಾಗೂ ಕೊಡೈಕೆನಾಲ್‌ನಲ್ಲಿರುವ ಆಕಾಶ ವೀಕ್ಷಣೆಯ ನೇರ ಪ್ರಸಾರವನ್ನು ಕೆಲವೇ ನಿಮಿಷಗಳ ಅಂತರದಲ್ಲಿ ಇಲ್ಲಿಯೂ ವೀಕ್ಷಿಸಬಹುದು. ಇಂತಹ ಅತ್ಯಾಧುನಿಕ ತಂತ್ರಜ್ಞಾನ ಮೈಸೂರಿಗೆ ಬಂದಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಇದರಿಂದ ಶಿಕ್ಷಣ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಉತ್ತೇಜನ ದೊರೆಯಲಿದೆ. ಮೈಸೂರು ವಿಶ್ವವಿದ್ಯಾಲಯವು ಇದನ್ನು ಸಮರ್ಪಕವಾಗಿ ಬಳಸಿಕೊಂಡರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.

ತಾರಾಲಯಕ್ಕೆ ಹೆಸರಿಡುವ ಕುರಿತು ಇನ್ನೂ ಚರ್ಚೆಯಾಗಿಲ್ಲ. ಈ ಸ್ಥಳವನ್ನು ತಮ್ಮ ತಾತನವರು ಮೊದಲು ಆಯಿಷ್ ಸಂಸ್ಥೆಗೆ ನೀಡಿದ್ದರು. ಬಳಿಕ ಮೈಸೂರು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಿದ್ದರು. ವಿಶ್ವವಿದ್ಯಾಲಯವು ಈ ಸ್ಥಳವನ್ನು ಸೃಜನಶೀಲವಾಗಿ ಬಳಸಿಕೊಳ್ಳುತ್ತಿರುವುದು ವಿದ್ಯಾರ್ಥಿಗಳ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಎಂದು ಹೇಳಿದರು.