

ಮೈಸೂರು: ಮೈಸೂರು ಮತ್ತು ಕೊಡಗು ಜಿಲ್ಲೆಯಲ್ಲಿ ಆನೆ ಮತ್ತು ಮಾನವ ನಡುವೆ ನಡೆಯುತ್ತಿರುವ ಸಂಘರ್ಷ ತಪ್ಪಿಸಲು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್ ಅವರನ್ನು ಮಂಗಳವಾರ ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಮೈಸೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಆನೆ ಮತ್ತು ಮಾನವ ಸಂಘರ್ಷ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು, ಮನುಷ್ಯರ ಮೇಲೆ ಆನೆಗಳ ದಾಳಿಯ ವರದಿಗಳು ಪ್ರತಿ ವಾರ ಕೇಳಿ ಬರುತ್ತಿದೆ. ಹಲವಾರು ಬಾರಿ ಗಾಯ ಹಾಗೂ ಪ್ರಾಣ ಹಾನಿ ಸಂಭವಿಸುತ್ತಿದೆ. ಆನೆಗಳು ನಾಡಿಗೆ ಲಗ್ಗೆ ಇಡುತ್ತಿರುವ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಕಾಫಿ ತೋಟ ನಾಶ ಹಾಗೂ ಕೃಷಿ ಬೆಳೆಗಳಿಗೆ ಹಾನಿ ಸಂಭವಿಸುತ್ತಿದೆ. ರೈತರು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳುವುದರ ಜತೆಗೆ ಜನರ ಜೀವ ಕಾಪಾಡುವ ಅವಶ್ಯಕತೆ ಇದೆ ಎಂದು ಯದುವೀರ್ ಸಚಿವರ ಗಮನ ಸೆಳೆದಿದ್ದಾರೆ.
ಆನೆ-ಮಾನವ ಸಂಘರ್ಷ ತಪ್ಪಿಸಲು ಆನೆಗಳು ನಾಡಿಗೆ ಬಾರದಂತೆ ತಡೆಯುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ರೈಲ್ವೆ ಬ್ಯಾರಿಕೇಡ್‌ಗಳು ಪರಿಣಾಮಕಾರಿಯಾದ ವಿಧಾನವಾಗಿದೆ. ಆದರೆ, ಎಲ್ಲ ಕಡೆಗಳಲ್ಲೂ ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸಲು ಸಾಧ್ಯವಾಗಿಲ್ಲ. ಅರಣ್ಯ-ಕೃಷಿ ಭೂಮಿ ಇರುವ ಜಾಗಗಳಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಕೆಯ ಅವಶ್ಯಕತೆ ಇದೆ. ಒಂದು ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ 1.3 ರಿಂದ 1.5 ಕೋಟಿ ರೂ.ವರೆಗೆ ವೆಚ್ಚವಾಗಲಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅರಣ್ಯದ ಗಡಿಯ ಉದ್ದವು 400 ಕಿ.ಮೀ. ಇದ್ದು, ಈ ಪೈಕಿ 280 ಕಿ.ಮೀ.ನಲ್ಲಿ ತುರ್ತಾಗಿ ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸುವ ಅವಶ್ಯಕತೆ ಇದೆ. ಇದಕ್ಕೆ 350 ರಿಂದ 400 ಕೋಟಿ ರೂ.ವೆಚ್ಚವಾಗಲಿದೆ. ನಮ್ಮ ಅಗತ್ಯಕ್ಕೆ ತಕ್ಕಷ್ಟು ರೈಲ್ವೆ ಕಂಬಿಗಳ ಪೂರೈಕೆಗೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.