ಇಂದ್ರಾಳಿ ಬ್ರಿಡ್ಜ್​ ಕಾಮಗಾರಿ ಜನವರಿ 15ರೊಳಗೆ ಪೂರ್ಣ

udp-23-indrali
Published on

ಉಡುಪಿ: ಕಳೆದ 4-5 ವರ್ಷಗಳಿಂದ ಸ್ಥಗಿತಗೊಂಡಿರುವ ಇಂದ್ರಾಳಿ ರೈಲ್ವೇ ಬ್ರಿಡ್ಜ್​ ಕಾಮಗಾರಿಯಿಂದಾಗಿ ಪ್ರತಿನಿತ್ಯ ಅಪಘಾತಗಳು ನಡೆಯುತ್ತಿದ್ದು, ನಿತ್ಯ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಉಡುಪಿ&ಮಣಿಪಾಲಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆ ಅವ್ಯವಸ್ಥೆ ಬಗ್ಗೆ ವಿವಿಧ ಸಂಟನೆಗಳು ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಯಶ್​ಪಾಲ್​ ಸುವರ್ಣ ಬುಧವಾರ ದಿಢೀರ್​ ಇಂದ್ರಾಳಿ ಬ್ರಿಡ್ಜ್​ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಕೋಟ, ಹೆದ್ದಾರಿಯಲ್ಲಿ ಜನವರಿ 15ರೊಳಗೆ ವಾಹನ ಸಂಚಾರಕ್ಕೆ ಅನುಕೂಲ ಮಾಡಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ತೀಮಾರ್ನವಾಗಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಜನವರಿ 15ರೊಳಗೆ ಕಾಮಗಾರಿ ಮುಗಿಸುವುದಾಗಿ ಪೊಲೀಸ್​ ಠಾಣೆಯಲ್ಲಿ ಮುಚ್ಚಳಿಕೆ ಬರೆದು ಕೊಟ್ಟಿದ್ದಾರೆ. ಕಾಮಗಾರಿ ವಿಳಂಬದಿಂದ ನಿತ್ಯ ಅಪಘಾತಗಳಾಗುತ್ತಿದ್ದು, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಎ್​ಐ ಆರ್​ ದಾಖಲಿಸಿ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದರು.

2018ರಲ್ಲಿ ಈ ಕಾಮಗಾರಿ ಆರಂಭವಾಗಿದೆ. ರೈಲ್ವೆ ಇಲಾಖೆಯ ಅನುಮತಿಯ ಗೊಂದಲದಿಂದ ಕಾಮಗಾರಿ ವಿಳಂಬವಾಗಿದೆ. 138 ಟನ್​ ತೂಕದ ಗರ್ಡರ್​ ಅಳವಡಿಸುವ ಯೋಜನೆ ಇದಾಗಿದ್ದು, ರಸ್ತೆ ಉದ್ದ 38 ಮೀಟರ್​ ನಿಂದ 58 ಮೀಟರ್​ ಗೆ ವಿಸ್ತರಣೆಯಾಗಿದೆ. ಗರ್ಡರ್​ ಗಳಿಗೆ ಅಳವಡಿಸುವ ಸ್ಟೀಲ್​ 420 ಟನ್​ ಗೆ ಏರಿಕೆಯಾಗಿದೆ. ಹೀಗಾಗಿ ಕೆಲಸ ವಿಳಂಬವಾಗಿದೆ. ಈಗ ಕಾಮಗಾರಿಗೆ ಬೇಕಾದ ಎಲ್ಲಾ ಮೆಟೀರಿಯಲ್ಸ್​ ಬಂದಿದೆ ಎಂದರು. ನಗರಸಭಾ ಸದಸ್ಯರಾದ ಗಿರೀಶ್​ ಅಂಚನ್​, ಅಶೋಕ್​ ನಾಯ್ಕ, ಭಾರತೀ ಪ್ರಶಾಂತ್​, ರಾ.ಹೆ. ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ ನಾಯಕ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net