ಸಂಪರ್ಕ ಅಭಿವೃದ್ಧಿಗೆ ಪ್ರಥಮ ಆದ್ಯತೆ - ಸಂಸದ ಕ್ಯಾ.ಬ್ರಿಜೇಶ್ ಚೌಟ ಭರವಸೆ - ಪುತ್ತೂರು ದೇಗುಲದಲ್ಲಿ ಮೋದಿಗಾಗಿ ವಿಶೇಷ ಪ್ರಾರ್ಥನೆ

PTR_18 JUN_1
Published on

ಪುತ್ತೂರು: ಮಂಗಳೂರಿನಲ್ಲಿ ಈಗಾಗಲೇ ಅನುಷ್ಠಾನದಲ್ಲಿರುವ ಅಭಿವೃದ್ಧಿ ಕಾಮಗಾರಿಗಳ ಲಿಸ್ಟ್ ಮಾಡಿ ಯಾವ್ಯಾವ ಹಂತದಲ್ಲಿದೆ, ಕಾನೂನು ತೊಡಕುಗಳು ಎಲ್ಲವನ್ನೂ ಸರಿಪಡಿಸಲು ವರದಿ ತಯಾರಿಸಲಾಗುವುದು. ಮಂಗಳೂರು-ಬೆಂಗಳೂರು ರಸ್ತೆ, ರೈಲ್ವೆ ಸಂಪರ್ಕ ರಸ್ತೆ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು. ಜಿಲ್ಲಾಽಕಾರಿಗಳ ಸಭೆ ಕರೆದು ಈ ಕುರಿತು ಚರ್ಚಿಸಲಾಗುವುದು ಎಂದು ದ.ಕ. ಸಂಸದ ಬ್ರಿಜೇಶ್ ಚೌಟ ಹೇಳಿದರು.


ಮಂಗಳವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.


ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಹಿಂದೂಪರ ಕಾರ್ಯಕರ್ತರ ಮೆಲೆ ದಬ್ಬಾಳಿಕೆ ಮಾಡಿ ಸುಳ್ಳು ಕೇಸುಗಳನ್ನು ಹಾಕುತ್ತಿದ್ದು, ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುವುದು. ಬಿ.ಸಿ.ರೋಡು, ಅಡ್ಡಹೊಳೆ, ಶಿರಾಡಿ ಘಾಟ್ ರಸ್ತೆಗಳಿಗಿರುವ ಅಡಚಣೆ, ಕಾನೂನು ತೊಡಕುಗಳನ್ನು ಮನಗಂಡು ಸಾಧ್ಯವಾದಷ್ಟು ಶೀಘ್ರದಲ್ಲಿ ಎಲ್ಲ ಕೆಲಸಗಳನ್ನು ಕಡಿಮೆ ಅವಽಯಲ್ಲಿ ಮಾಡಿ ಮುಗಿಸುವ ಇರಾದೆ ಹೊಂದಿದ್ದೇವೆ ಎಂದು ತಿಳಿಸಿದರು.


ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದು, ಅವರ ಶ್ರೇಯಸ್ಸಿಗೋಸ್ಕರ ಸೋಮವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಯಿತು. ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಲ್ಲಿಕಾ ಪ್ರಸಾದ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಬಿಜೆಪಿ ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ, ಅಪ್ಪಯ್ಯ ಮಣಿಯಾಣಿ, ಸಾಜ ರಾಧಾಕೃಷ್ಣ ಆಳ್ವ, ಪಿ.ಜಿ.ಜಗನ್ನಿವಾಸ ರಾವ್, ಆರ್.ಸಿ.ನಾರಾಯಣ, ಬುಡಿಯಾರ್ ರಾಧಾಕೃಷ್ಣ ರೈ, ಅರುಣ್ ಕುಮಾರ್ ಪುತ್ತಿಲ, ನಿತೀಶ್ ಕುಮಾರ್ ಶಾಂತಿವನ, ಚಂದ್ರಶೇಖರ ರಾವ್ ಬಪ್ಪಳಿಗೆ, ಅನಿಲ್ ತೆಂಕಿಲ, ಪ್ರಸನ್ನ ಮಾರ್ತಾ, ರಾಜೇಶ್ ಬನ್ನೂರು, ಸಹಜ್ ರೈ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net