

ಬೆಂಗಳೂರು; ನಾನು ಬಿಬಿಎಂಪಿಯಲ್ಲಿ ನಡೆಯುತ್ತಿದ್ದ ಬೆಡ್ ಬ್ಲಾಕಿಂಗ್ ದಂಗೆಯನ್ನು ಬಯಲಿಗೆಳೆದ ಮೇಲೆ ಕೋವಿಡ್ ನಿಂದ ಬಳಲುತ್ತಿರುವ ಅರ್ಹರಿಗೆ ಹಾಸಿಗೆಗಳು ಸಿಗುತ್ತಿವೆ ಹಾಗೂ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಜಯನಗರದ ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಡ್ ಬ್ಲಾಕಿಂಗ್ ದಂಧೆ ಬಗ್ಗೆ ಸಿಎಂ ಅವರು ಸಿಸಿಬಿ ತನಿಖೆಗೆ ಆದೇಶಿಸಿದರು. ಅದಾದ ನಂತರ ಲೋಕಾಯುಕ್ತದವರೇ ಸುಮೋಟೊ ಕೇಸ್ ದಾಖಲಿಸಿಕೊಂಡರು. ಈ ವಿಷಯವನ್ನು ಹೈಕೋರ್ಟ್ ಕೂಡ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೇ ನಂದನ್ ನಿಲೇಕಣಿ ಅವರು ಬೆಡ್ ಹಂಚಿಕೆ ಬಗ್ಗೆ ಹೊಸ ತಂತ್ರಾಂಶ ರೂಪಿಸಿದರು ಎಂದರು.
ನಾನು ಬೆಡ್ ಬ್ಲಾಕಿಂಗ ದಂಧೆಯನ್ನು ಬಯಲಿಗೆಳಿದಿದ್ದು ಯಾವುದೇ ವ್ಯಕ್ಯಿಯನ್ನು, ಸಮುದಾಯವನ್ನು ಟಾರ್ಗೆಟ್ ಮಾಡಲು ಅಲ್ಲ. ವ್ಯವಸ್ಥೆಯಲ್ಲಿ ಬದಲಾವಣೆ ತರುವುದು ಆಗಿತ್ತು. ಇಂತಹ ಕಷ್ಟದ ಸಮಯದಲ್ಲಿ ಜನಸಾಮಾನ್ಯರಿಗೆ ಸರ್ಕಾರದ ಮೇಲೆ ನಂಬಿಕೆ ಬರಬೇಕು ಎಂದರು.
ಇನ್ನು ಬೆಡ್ ಬ್ಲಾಕಿಂಗ್ ಬಗ್ಗೆ ಜನಸಾಮಾನ್ಯರನ್ನು ಕಾಂಗ್ರೆಸ್ ದಿಕ್ಕು ತಪ್ಪಿಸಿದೆ. ನಾನು ವಾರ್ ರೂಮ್ ಗೆ ಹೋಗುವ ಮುನ್ನ16 ಜನರನ್ನು ಕೆಲಸದಿಂದ ತೆಗೆದಿದ್ದರು. ನಾನು ಆ ಪಟ್ಟಿಯನ್ನು ಓದಿದ್ದೆ. ಸಾರ್ವಜನಿಕ ವಿಚಾರವನ್ನು ಪ್ರಶ್ನೆ ಮಾಡಿದ್ದು ತಪ್ಪಾ ಎಂದು ಪ್ರಶ್ನಿಸಿದರು.
ವಾರ್ ರೂಮ್ ಘಟನೆ ನಂತರ ನಾನು ಅಲ್ಲಿಗೆ ಹೋಗಿ ಸಿಬ್ಬಂದಿ ಕ್ಷಮೆ ಕೇಳಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ನಾನು ಯಾರ ಕ್ಷಮೆಯೂ ಕೇಳಿಲ್ಲ. ನಾನು ಭ್ರಷ್ಟ ವ್ಯವಸ್ಥೆ ಬಗ್ಗೆ ಹೋರಾಡಿದ್ದೇನೆ. ಈ ಬಗ್ಗೆ ಸಿಸಿಬಿ ತನಿಖೆಯಲ್ಲಿ ಸತ್ಯಾಂಶ ಹೊರಗೆ ಬರಲಿದೆ ಎಂದು ಹೇಳಿದರು.