ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಗಮನದ ಬಳಿ ಟ್ರಾಫಿಕ್ ಪರಿಹಾರಕ್ಕೆ ಸಂಸದ ತೇಜಸ್ವಿ ಸೂಚನೆ

mp surya visit
Published on

ಬೆಂಗಳೂರು: ಇತ್ತೀಚಿಗೆ ಸೇವೆ ಆರಂಭಗೊಂಡಿರುವ ಡಬಲ್ ಡೆಕ್ಕರ್ ಫ್ಲೈ ಓವರ್‌ನಿಂದ ಸಿಲ್ಕ್ ಬೋರ್ಡ್ ಬಳಿಯ ಟ್ರಾಫಿಕ್ ಸಮಸ್ಯೆಯು ಜಯನಗರದ ರಾಘವೇಂದ್ರ ಸ್ವಾಮಿ ಮಠದ ಬಳಿ ಜಮಾವಣೆಗೊಂಡು ಜನವಸತಿ ಇರುವ ಜಯನಗರ, ಜೆ.ಪಿ.ನಗರ ಪ್ರದೇಶಗಳಲ್ಲಿ ತೊಂದರೆಯಾಗುತ್ತಿದೆ. ಇದಕ್ಕೆ ತಾಂತ್ರಿಕ ಪರಿಹಾರ ಕಂಡುಕೊಳ್ಳುವಂತೆ ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸಂಸ ತೇಜಸ್ವಿ ಸೂರ್ಯ ಸೂಚಿಸಿದರು.

ಶನಿವಾರ ಸ್ಥಳೀಯ ಶಾಸಕರು ಹಾಗೂ ಬಿಎಂಆರ್‌ಸಿಎಲ್ ಅಧಿಕಾರಿಗಳೊಂದಿಗೆ ಪರಿಶೀಲನಾ ನಡೆಸಿದ ಅವರು, ಡಬಲ್ ಡೆಕ್ಕರ್ ಉತ್ತಮ ಯೋಜನೆಯಾದರೂ ಕೆಲವೆಡೆ ಸಮಸ್ಯೆ ಸೃಷ್ಟಿಸಿದೆ. ಸಾರ್ವಜನಿಕ ಸೇವೆಗೆಮುಕ್ತವಾದ ಬಳಿಕ ಸಮಸ್ಯೆ ಉಂಟಾಗಿರುವುದರಿಂದ ಮೆಟ್ರೋ ಅಧಿಕಾರಿಗಳೇ ನಿಖರ ಪರಿಹಾರ ಒದಗಿಸಬೇಕು ಎಂದರು.

ನಾಗರಿಕ ಸಂಘಗಳೊಂದಿಗೆ ಸಂವಾದ:

ಉದ್ದೇಶಿತ ಮೆಟ್ರೋ 3ನೇ ಹಂತದ ಯೋಜನೆ ಬಗ್ಗೆ ನಾಗರಿಕ ಸಂಘಗಳ ಪದಾಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳೊಂದಿಗೆ ಸಂಸದ ತೇಜಸ್ವಿ ಸಂವಾದ ನಡೆಸಿದರು. ಈ ವೇಳೆ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿ ಶಾಸಕರು ಪಾಲ್ಗೊಂಡರು. ಇದಕ್ಕೂ ಮುನ್ನ ಸಂಸದರು ಸ್ಥಳೀಯ ಶಾಸಕರ ಜೊತೆಗೂಡಿ ಮೆಟ್ರೋ ಹಾದುಹೋಗಲಿರುವ ಮಾರ್ಗದಲ್ಲಿ ಪರಿಶೀಲನೆ ನಡೆಸಿದರು.

ಮೆಟ್ರೋ 3ನೇ ಹಂತದ ಮಾರ್ಗವು ಜೆ.ಪಿ.ನಗರ 4ನೇ ಹಂತದಿಂದ ಹೆಬ್ಬಾಳ ಕೆಂಪಾಪುರ ವರೆಗೆ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗೆ ಇರಲಿದೆ. ಎರಡೂ ಕಾರಿಡಾರ್‌ನಿಂದ ಒಟ್ಟು 44 ಕಿ.ಮೀ. ಉದ್ದದ ಯೋಜನೆಗೆ 15,611 ಕೋಟಿ ರೂ. ಮೊತ್ತಕ್ಕೆ ಒಪ್ಪಿಗೆ ನೀಡಿದ್ದು, ಈ ಮಾರ್ಗವು ಬೆಂಗಳೂರು ದಕ್ಷಿಣದ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ. ಯೋಜನೆ ಜಾರಿ ಸಂಬಂಧ ಕೇಂದ್ರವು ರಾಜ್ಯ ಸರ್ಕಾರದ ಮಟ್ಟದಲ್ಲಿ ಹಲವು ಬಾರಿ ಚರ್ಚೆಗಳನ್ನು ನಡೆಸಿ ಮಾರ್ಗದ ಅಗತ್ಯತೆಯನ್ನು ಸಂಸದ ಸೂರ್ಯ ಮನವರಿಕೆ ಮಾಡಿಕೊಟ್ಟಿದ್ದನ್ನು ಸ್ಮರಿಸಿದರು.

ಇದೇ ವೇಳೆ ನಾಗರಿಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸ್ಥಳೀಯರು 3ನೇ ಹಂತದ ಯೋಜನೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಕಾಮಗಾರಿ ನಡೆಯುವ ವೇಳೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಶಾಸಕರಾದ ಸತೀಶ್ ರೆಡ್ಡಿ, ಸಿ.ಕೆ. ರಾಮಮೂರ್ತಿ, ರವಿ ಸುಬ್ರಹ್ಮಣ್ಯ, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎ.ಎಚ್.ಬಸವರಾಜು ಹಾಗೂ ಇತರರು ಹಾಜರಿದ್ದರು.

ಮೆಟ್ರೋ 3ನೇ ಹಂತದ ಮಾರ್ಗದಲ್ಲಿ ರಿಂಗ್ ರೋಡ್ ಜತೆಗೆ ಕಾಮಾಕ್ಯ ಜಂಕ್ಷನ್, ಪಿಇಎಸ್ ಯುನಿವರ್ಸಿಟಿ ಬಳಿ ಹೆಚ್ಚಿನ ವಾಹನ ಸಂಚಾರವಿದ್ದು, ಇಲ್ಲಿ ಮೆಟ್ರೋ ನಿಲ್ದಾಣಗಳು ಇರಲಿವೆ. ಈ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸ್ಕೈವಾಕ್, ಫುಟ್‌ಓವರ್ ಬ್ರಿಜ್ ನಿರ್ಮಿಸಿ, ಬಹು ಆಯಾಮದ ಸಂಚಾರಕ್ಕೆ ಅವಕಾಶ ಕಲ್ಪಿಸಲು ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.

- ತೇಜಸ್ವಿ ಸೂರ್ಯ, ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net