

ರಾಮನಗರ: ಹಣೇಲಿ ಬರೆದಿದ್ದರೆ ಎಲ್ಲಾ ಆಗುತ್ತೆ, ಬರೆದಿಲ್ಲ ಎಂದರೆ ಏನೂ ಮಾಡೋಕಾಗಲ್ಲ ಮೂಲ ಕಾಂಗ್ರೆಸಿಗರಲ್ಲದ ಸಿದ್ದರಾಮಯ್ಯ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶ ಸಿಗಲಿಲ್ಲವೇ. ಅದೇ ರೀತಿ ಪಕ್ಷಕ್ಕೆ ಯಾರೇ ಬಂದರೂ ಅವರನ್ನು ತಡೆಯುವ ಕೆಲಸಕ್ಕೆ ಹೋಗಬಾರದು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಸುರೇಶ್ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದ್ದಾರೆ.
ರಾಮನಗರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಅನ್ಯ ಪಕ್ಷದಿಂದ ಬಂದ ಕಾರ್ಯಕರ್ತರು ಮತ್ತು ಮುಖಂಡರಿಗೆ ಮಣೆ ಹಾಕಲಾಗುತ್ತಿದೆ ಎಂದು ಮೂಲ ಕಾಂಗ್ರೆಸಿಗರು ಬೇಸರ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಾತನಾಡಿದ ಡಿ.ಕೆ.ಸುರೇಶ್, ಸಿದ್ದರಾಮಯ್ಯ ಮೂಲ ಕಾಂಗ್ರೆಸ್‌ದವರಲ್ಲ. ಬೇರೆ ಪಕ್ಷದಿಂದ ಬಂದವರು, ಆದರೂ, ನಾವು ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. 2ನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದಾರೆ, ನಮ್ಮ ನಾಯಕರಾಗಿದ್ದಾರೆ. ಈ ಮೂಲಕ ಅವರು ರಾಜ್ಯಕ್ಕೆ ಹೊಸ ಕಾಯಕಲ್ಪ ಕೊಟ್ಟಿದ್ದಾರೆ. ಬಡವರಿಗಾಗಿ ಒಂದಷ್ಟು ಕಾರ್ಯಕ್ರಮ ಕೊಟ್ಟಿದ್ದಾರೆ. ಹಾಗಾಗಿ ಹಣೇಲಿ ಬರೆದಿದ್ದರೆ ಎಲ್ಲಾ ಆಗುತ್ತೆ, ಬರೆದಿಲ್ಲ ಎಂದರೆ ಏನೂ ಮಾಡೋಕಾಗಲ್ಲ ಎಂದು ತಿಳಿಸಿದರು.
ಜೆಡಿಎಸ್ ನಾಯಕರು ಸಿದ್ದರಾಮಯ್ಯ ಅವರಿಗೆ ಬೀಗ ಹಾಕಿ ಕೂರಿಸಿದ್ದರು. ಅಮಾನತು ಮಾಡಿದ್ದರು. ಆದರೆ, ಅವರ ಯೋಗ ಅ ಪಕ್ಷದಲ್ಲಿ ಬರೆದಿರಲಿಲ್ಲ, ಇಲ್ಲಿ ಬರೆದಿತ್ತು. ಹಾಗೆಯೇ ನಿಮ್ಮ ಯೋಗ ಸಹ ಬರೆದಿರಬಹುದು. ಯಾರನ್ನೂ ಅಡ್ಡ ಹಾಕೋಕೆ ಹೋಗಬೇಡಿ, ಪಕ್ಷ ಬೆಳೆಸುವ ನಿಟ್ಟಿನಲ್ಲಿ ಹಾಗೂ ಪಕ್ಷದ ಅಭ್ಯರ್ಥಿಗೆ ಹೆಚ್ಚು ಮತಗಳನ್ನು ತಂದುಕೊಡುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.