

ಮಂಡ್ಯ: ಬದ್ಧ ವೈರಿ ಜೆಡಿಎಸ್ ಪಕ್ಷವನ್ನು ಜಿಲ್ಲೆಯಲ್ಲಿ ಹಣಿಯಲೇಬೇಕೆನ್ನುವ ಹಠದೊಂದಿಗೆ ಪಕ್ಷೇತರ ಸಂಸದೆ ಸುಮಲತಾ ಅಂಬರೀಷ್ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದಾರೆನ್ನುವ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ.
ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ರಾಜಕೀಯ ಪಕ್ಷಗಳು ಕೂಡ ಸಿದ್ಧತೆ ಮಾಡಿಕೊಳ್ಳುತ್ತಿವೆ. ಈ ನಡುವೆ ಸುಮಲತಾ ಅವರು ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡಿರುವ ಬಗ್ಗೆ ವಿಶ್ಲೇಷಣೆಯೂ ಆರಂಭಗೊಂಡಿದೆ. ಅದರಂತೆ ಬಿಜೆಪಿ ಪರ ಸ್ಟಾರ್ ಪ್ರಚಾರಕಿಯಾಗಿ ಸಂಸದೆ ಕಾಣಿಸಿಕೊಳ್ಳಲಿದ್ದು, ಜೆಡಿಎಸ್ ವಿರುದ್ಧ ಚುನಾವಣೆ ಮಾಡಲು ಸಜ್ಜಾಗಿದ್ದಾರೆ.
ಕುತೂಹಲ ಮೂಡಿಸಿದ ನಡೆ: ಕಳೆದ ಲೋಕಸಭಾ ಚುನಾವಣೆಯಿಂದಲೂ ಜೆಡಿಎಸ್ ವಿರುದ್ಧ ಲೆಕ್ಕವಿಲ್ಲದಷ್ಟೂ ಟೀಕೆ ಮಾಡಿಕೊಂಡೇ ಬರುತ್ತಿರುವ ಸಂಸದೆ, ಶುಕ್ರವಾರ ಬಿಜೆಪಿಗೆ ಬೆಂಬಲ ಘೋಷಿಸಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿಯೂ ದಳದ ವಿರುದ್ಧ ವಾಗ್ದಾಳಿ ನಡೆಸಿದರು. ಆದರೆ ಗಮನಾರ್ಹ ಅಂಶವೆಂದರೆ ಕಾಂಗ್ರೆಸ್ ಬಗ್ಗೆ ಅಷ್ಟೇನೂ ಟೀಕೆ ಮಾಡುವ ಗೋಜಿಗೆ ಹೋಗಲಿಲ್ಲ. ಈ ನಡುವೆ ಕೆಲ ಷರತ್ತುಗಳನ್ನು ಮುಂದಿಟ್ಟು ಬೆಂಬಲ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಇದು ಕುತೂಹಲ ಮೂಡಿಸಿದೆ.
ಅಂದರೆ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ರಾಜಕೀಯ ಮಾಡಿಕೊಂಡು ಬರುತ್ತಿವೆ ಎನ್ನುವ ಆರೋಪ ಇಂದಿಗೂ ಇದೆ. ಇನ್ನು ರಾಜ್ಯ ರಾಜಕೀಯಕ್ಕೆ ಬರುವ ಬಗ್ಗೆ ಸಂಸದೆ ಸ್ಪಷ್ಟತೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿ ಫಾರ್ಮ್ ಕೊಡುವ ಹಾಗೂ ಪ್ರಚಾರ ವಿಚಾರದಲ್ಲಿ ಸುಮಲತಾ ಎಂಟ್ರಿ ಕೊಡುವ ಸಾಧ್ಯತೆ ಇದೆ. ಇನ್ನು ಜಿಲ್ಲೆಯ ಆರು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರೇ ಇರುವುದರಿಂದ ಸಂಸದೆ ನೇತೃತ್ವದಲ್ಲಿ ಚುನಾವಣಾ ಪ್ರಚಾರ ನಡೆಸುವ ಮಾತನ್ನು ತಳ್ಳಿಹಾಕುವಂತಿಲ್ಲ.
ಜೆಡಿಎಸ್ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಸುರಿಸುವ ಸುಮಲತಾ, ಬಿಜೆಪಿಗೆ ಬೆಂಬಲ ಘೋಷಿಸುವ ಸಮಯದಲ್ಲಿಯೇ ದಳಪತಿಗಳ ಬಗ್ಗೆ ವಾಗ್ದಾಳಿ ನಡೆಸಿದರು. ಅದೇ ತಂತ್ರಗಾರಿಕೆಯನ್ನು ಚುನಾವಣಾ ಪ್ರಚಾರದಲ್ಲಿಯೂ ಬಳಸಬಹುದು. ಇನ್ನು ಬಿಜೆಪಿ ಮತ ಗಳಿಕೆ ಹೆಚ್ಚಾದಷ್ಟು ಜೆಡಿಎಸ್‌ಗೆ ಡ್ಯಾಮೆಜ್ ಆಗಲಿದೆ. ಇತ್ತ ಕಾಂಗ್ರೆಸ್‌ಗೆ ಅದು ಫ್ಲಸ್ ಆಗುವುದರಲ್ಲಿ ಅನುಮಾನವಿಲ್ಲ.
ಸದ್ಯಕ್ಕೆ ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲವಷ್ಟೇ ಘೋಷಣೆ ಮಾಡಿದ್ದು, ಪಕ್ಷ ಸೇರ್ಪಡೆ ಕುರಿತು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದ್ದಾರೆ. ಜತೆಗೆ ಕಾಂಗ್ರೆಸ್ ಕುರಿತು ಮೃದುಧೋರಣೆ ತೋರಿರುವುದು ಹಲವು ಲೆಕ್ಕಾಚಾರಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಕಮಲ ಪಾಳಯದಲ್ಲಿಯೇ ಮುಂದುವರೆಯುತ್ತಾರೆಯೋ ಅಥವಾ ‘ಕೈ’ ಹಿಡಿಯುತ್ತಾರೆಯೋ ಎನ್ನುವುದನ್ನು ಕಾದುನೋಡಬೇಕಿದೆ.
ರೈತ ಸಂಘಕ್ಕೆ ಇರಿಸು ಮುರಿಸು?: ಲೋಕಸಭಾ ಚುನಾವಣೆ ಸಮಯದಲ್ಲಿ ಮಾತ್ರವಲ್ಲದೆ ಇತ್ತೀಚಿನವರೆಗೂ ಸುಮಲತಾ ಅವರ ಪರವಾಗಿ ರೈತ ಸಂಘ ಬೆಂಬಲವಾಗಿ ನಿಂತಿತ್ತು. ಮಾತ್ರವಲ್ಲದೆ ಜೆಡಿಎಸ್ ಶಾಸಕರು ಸಂಸದೆಯನ್ನು ಟೀಕಿಸಿದಾಗಲೆಲ್ಲ ರೈತ ಸಂಘದ ಮುಖಂಡರು ದಳಪತಿಗಳಿಗೆ ಟಾಂಗ್ ಕೊಡುತ್ತಿದ್ದರು. ಇನ್ನೊಂದೆಡೆ ಬಿಜೆಪಿ ಸರ್ಕಾರಗಳ ವಿರುದ್ಧ ಪ್ರತಿ ಹಂತದಲ್ಲಿಯೂ ರೈತ ಸಂಘದ ಹೋರಾಟ ಮಾಡುತ್ತಿದೆ. ಹೀಗಿರುವಾಗ ಸುಮಲತಾ ಬಿಜೆಪಿಯನ್ನೇ ಬೆಂಬಲಿಸಿರುವುದು ರೈತ ಸಂಘಕ್ಕೆ ಇರಿಸು ಮುರಿಸು ತಂದಿದೆ. ಮಾತ್ರವಲ್ಲದೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಸಂಸದೆ ಮತಯಾಚನೆಗಿಳಿದರೆ ಮೇಲುಕೋಟೆ ಮತ್ತು ಮಂಡ್ಯ ಕ್ಷೇತ್ರದಲ್ಲಿ ರೈತ ಸಂಘಕ್ಕೆ ವಿರುದ್ಧವೇ ಆಗಲಿದ್ದಾರೆನ್ನುವುದು ವಿಶೇಷ.
ಮಂಡ್ಯ ಬಿಟ್ಟು ಹೋಗಲ್ಲವೆಂದ ಸಂಸದೆ: ಬೆಂಬಲ ಘೋಷಿಸುವ ಸಮಯದಲ್ಲಿಯೇ ತಾನು ಮುಂದಿನ ದಿನಗಳಲ್ಲಿ ಮಂಡ್ಯ ಬಿಟ್ಟು ಹೋಗುವುದಿಲ್ಲವೆಂದು ಸ್ಪಷ್ಟನೆ ನೀಡಿದ ಸುಮಲತಾ, ನಾನು ಬಿಜೆಪಿ ಸೇರ್ಪಡೆಯಾಗಿ ಬೆಂಗಳೂರಿಗೆ ಹೋಗುತ್ತೇನೆ ಎಂಬುದು ಸುಳ್ಳು. ರಾಜಕಾರಣ ಬಿಟ್ಟರೂ ಸ್ವಾಭಿಮಾನ ಬಿಡಲ್ಲ. ಮಂಡ್ಯದ ಜನರೊಂದಿಗೆ ಸದಾ ಇರುತ್ತೇನೆ. ಅಂಬರೀಷ್ ಹೆಸರಿಗೆ ಕಳಂಕ ತರುವ ಪ್ರಯತ್ನ ಮಾಡಲ್ಲ. ಅವರ ಹೆಸರನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ ಎಂದಿದ್ದಾರೆ.
ರಾಜ್ಯ ರಾಜಕಾರಣಕ್ಕೆ ಬರುವ ನಿರ್ಧಾರ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ. ಬಿಜೆಪಿಯ ಹೈಕಮಾಂಡ್ ನಾಯಕರು ಸೂಚಿಸಿದರೆ ಪ್ರಯತ್ನಿಸಲಾಗುವುದು. ಇದು ಟ್ರಯಲ್ ಅಷ್ಟೇ. ಸಿನಿಮಾ ಇನ್ನೂ ಬಾಕಿ ಇದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಾಹ್ಯ ಬೆಂಬಲ ನೀಡಿದರೆ, ಕಾಂಗ್ರೆಸ್, ರೈತಸಂಘ ಸೇರಿದಂತೆ ಸಂಘ-ಸಂಸ್ಥೆಗಳ ಮುಖಂಡರು, ಕಾರ್ಯಕರ್ತರು ನನಗೆ ಬೆಂಬಲ ನೀಡಿದರು. ಆದರೆ ರಾಜ್ಯಮಟ್ಟದ ಕಾಂಗ್ರೆಸ್ ನಾಯಕರು ನನಗೆ ಬೆಂಬಲ ನೀಡಲಿಲ್ಲ. ಅಂಬರೀಷ್ ಅವರಿಗೆ ಕಾಂಗ್ರೆಸ್‌ನಿಂದ ಅವಮಾನವಾಗಿದೆ. ಅಂಬರೀಷ್ ಪಕ್ಷಾತೀತವಾಗಿದ್ದರು. ಆದರೆ ಅವರನ್ನು ಮಂತ್ರಿ ಸ್ಥಾನದಿಂದ ಕಿತ್ತು ಹಾಕಿ ಅವಮಾನ ಮಾಡಿದರು. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಅವಮಾನಿಸಿದರು ಎಂದರು.
ಮಂಡ್ಯ ಜಿಲ್ಲೆಯಲ್ಲಿ ನಮ್ಮ ಭದ್ರಕೋಟೆ ಎಂದು ಎದೆ ಬಡಿದುಕೊಂಡು ಹೇಳುವವರು ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ. ಬೇರೆ ಜಿಲ್ಲೆಗಳು ಅಭಿವೃದ್ಧಿಯಾಗುತ್ತಿದ್ದರೆ, ಮಂಡ್ಯ ಜಿಲ್ಲೆ ಇದ್ದ ಹಾಗೆ ಇದೆ. ಯಾವುದೇ ಅಭಿವೃದ್ಧಿ ಯೋಜನೆಗಳಿಲ್ಲ. ಕೆಆರ್‌ಎಸ್ ಡ್ಯಾಂ ಇಲ್ಲ ಅಂದರೆ, ಮಂಡ್ಯ ಇಲ್ಲ. ಡ್ಯಾಂ ಜಿಲ್ಲೆಯ ಸಂಕೇತ. ಆದರೆ ಅದನ್ನು ಕಾಪಾಡುವ ಕೆಲಸ ಮಾಡಲಿಲ್ಲ. ನಾನು ಸಂಸದೆಯಾಗಿ ನನ್ನ ಕೆಲಸ ಮಾಡಿಕೊಂಡು ಹೋಗುತ್ತಿದ್ದರೆ, ಒಂದು ಹೆಣ್ಣು ಎಂದು ನೋಡದೆ ಜೆಡಿಎಸ್ ಶಾಸಕರು ನನ್ನ ವಿರುದ್ಧ ಹೀನಾಯವಾಗಿ ಮಾತನಾಡಿದರು. ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳ ಬಾಯಲ್ಲಿ ಬರಬಾರದು ಶಬ್ಧಗಳು ಬಂದವು. ಇವರಿಗೆ ಬರೀ ರಾಜಕಾರಣವೇ ಮುಖ್ಯ ಎಂದು ಹರಿಹಾಯ್ದರು.