

ಮಂಡ್ಯ: ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗೆ ಮಹಿಳೆಯರ ಪಾತ್ರ ಅಪಾರ ಎಂದು ಸಂಸದೆ ಸುಮಲತಾ ಅಂಬರೀಷ್ ಬಣ್ಣಿಸಿದರು.
ತಾಲೂಕಿನ ಬಿ.ಹೊಸೂರು ಕಾಲನಿಯಲ್ಲಿ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹೊರಾವರಣ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿದ್ದ ಪ್ರಸಕ್ತ ಸಾಲಿನ ವಾರ್ಷಿಕ ದಿನಾಚರಣೆ, ಸ್ನಾತಕ ಪದವಿ ಉದ್ಘಾಟನೆ ಹಾಗೂ ಜ್ಞಾನಕಾವೇರಿ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಇತ್ತೀಚೆಗೆ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ. ಸಮಾಜ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಅಪಾರ. ಕುಟುಂಬದ ನಿರ್ವಹಣೆ ಜತೆಗೆ ಮಕ್ಕಳಿಗೆ ಮೊದಲ ಶಿಕ್ಷಕರಾಗಿ ಸಾಮಾಜಿಕ ಜವಾಬ್ದಾರಿ ಇರುತ್ತದೆ. ಈ ಎಲ್ಲವನ್ನು ನಿಭಾಯಿಸುವ ಶಕ್ತಿ ಮಹಿಳೆಯರಿಗಿದೆ. ಮಹಿಳೆ ಮನಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಸಾಕಷ್ಟು ನಿದರ್ಶನಗಳು ಕಣ್ಣ ಮುಂದಿವೆ ಎಂದರು.
ಈ ಹಿಂದೆ ಮಹಿಳೆಯರಿಗೆ ಉನ್ನತ ವ್ಯಾಸಂಗಕ್ಕೆ ಕಳುಹಿಸುತ್ತಿರಲಿಲ್ಲ. ಮದುವೆ ಮಾಡಿ ಕಳುಹಿಸಿದರೆ ಸಾಕು ಎಂದು ಪಾಲಕರು ಭಾವಿಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನಿಮಗೆಲ್ಲ ಉತ್ತಮ ಅವಕಾಶಗಳು ಲಭಿಸಿವೆ. ಇದರ ಸದುಪಯೋಗ ಪಡೆದುಕೊಂಡು ಉನ್ನತ ಸ್ಥಾನ ಗಳಿಸಿ ಎಂದು ಶುಭ ಹಾರೈಸಿದ ಅವರು, ನನಗೆ ಎಲ್ಲವೂ ಸಿಕ್ಕಿದೆ. ಆದರೆ ಪದವೀಧರೆಯಾಗಲು ಸಾಧ್ಯವಾಗಲಿಲ್ಲವಲ್ಲ ಎನ್ನುವ ಕೊರಗಿದೆ. ನಿಮಗೆ ಅವಕಾಶ ಸಿಕ್ಕಿದೆ ನೀವೇ ಅದೃಷ್ಟವಂತರು ಎಂದರು.
ಅಂಬರೀಷ್ ಅವರು ವಸತಿ ಸಚಿವರಾಗಿದ್ದ ಅವಧಿಯಲ್ಲಿ ಅಕ್ಕಮಹಾದೇವಿ ಮಹಿಳಾ ವಿವಿಗೆ 18 ಎಕರೆ ಜಾಗ ಗುರುತಿಸಿ 6 ತಿಂಗಳ ಅವಧಿಯಲ್ಲಿ ವಿವಿಗೆ ಕೊಡಿಸಿದಾರೆ. ನೂತನ ಕಟ್ಟಡ ನಿರ್ಮಾಣ ಮಾಡಿಸಿದ್ದಾರೆ. ಕಾಲೇಜಿಗೆ ಲೈಬ್ರರಿ, ಕುಡಿಯುವ ನೀರಿನ ವ್ಯವಸ್ಥೆ, ಬಿಸಿಎಂ ಹಾಸ್ಟೆಲ್ ಹಾಗೂ ಕಾಲೇಜಿನ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಿಸಿಕೊಡುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ. ಮುಂದಿನ ದಿನಗಳಲ್ಲಿ ಸಂಸದರ ಅನುದಾನದಿಂದ ಕೆಲಸಗಳನ್ನು ಮಾಡಿಸಿಕೊಡುವ ಭರವಸೆ ನೀಡಿದರು.
ವಿವಿ ಕುಲಸಚಿವ ಬಿ.ಎಸ್.ನಾವಿ, ಕುಲಪತಿ ಬಿ.ಕೆ.ತುಳಸಿಮಾಲಾ, ವಿಶೇಷಾಧಿಕಾರಿ ಪ್ರೊ.ಹೇಮಲತಾ, ಕನ್ನಡ ವಿಭಾಗದ ಉಪನ್ಯಾಸಕಿ ಡಾ.ಗೀತಾಮಣಿ ಇತರರಿದ್ದರು.