

ಚಿಕ್ಕಬಳ್ಳಾಪುರ: ಹಕ್ಕಿಜ್ವರ ಪತ್ತೆ ಮೂಲ, ಹರಡುವಿಕೆಯ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ಪರಿಹಾರ ಕ್ರಮ ಕೈಗೊಳ್ಳಲು ತನಿಖಾ ಸಮಿತಿಯನ್ನು ರಚಿಸಬೇಕು ಎಂದು ಸಂಸದ ಡಾ ಕೆ.ಸುಧಾಕರ್ ಒತ್ತಾಯಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿನ ಕಚೇರಿಯಲ್ಲಿ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಪಶು ಸಂಗೋಪನಾ ಸೇರಿದಂತೆ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಹಕ್ಕಿಜ್ವರ ನಿಯಂತ್ರಣದ ಬಗ್ಗೆ ಚರ್ಚಿಸಿ, ಸಲಹೆ ಸೂಚನೆಗಳನ್ನು ನೀಡಲಾಗಿದೆ. ಕರ್ನಾಟಕ, ಆಂಧ್ರ ಜತೆಗೆ ವಿವಿಧ ಭಾಗಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಆತಂಕದ ವಾತಾವರಣ ನಿರ್ಮಾಣವಾಗುತ್ತಿದೆ. ಇದನ್ನು ನಿವಾರಿಸಲು ಪರಿಣಾಮಕಾರಿ ಪರಿಹಾರ ಕ್ರಮಗಳ ಅಗತ್ಯವಿದೆ ಎಂದು ತಿಳಿಸಿದ್ದಾರೆ.
*ಶಾಸಕರ ಕ್ಷುಲ್ಲಕ ರಾಜಕಾರಣ
ಕ್ಷೇತ್ರದಲ್ಲಿ ವಸತಿ ರಹಿತರಿಗೆ ಸರ್ಕಾರದಿಂದ ಉಚಿತ ನಿವೇಶನಗಳನ್ನು ವಿತರಿಸುವುದರಲ್ಲಿ ಕ್ಷುಲ್ಲಕ ರಾಜಕಾರಣ ಮಾಡಲಾಗುತ್ತಿದೆ ಎಂದು ಸಂಸದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ೨೨ ಸಾವಿರ ವಸತಿ ರಹಿತರಿಗೆ ಉಚಿತ ನಿವೇಶನದ ಹಕ್ಕು ಪತ್ರಗಳನ್ನು ವಿತರಿಸಲಾಯಿತು. ಆದರೆ, ಈಗ ಸಂಸದರಿಗೆ ಎಲ್ಲಿ ಹೆಸರು ಬರುತ್ತದೆಯೋ? ಎಂಬ ಭಾವನೆಯಲ್ಲಿ ಶಾಸಕರು ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
*ಅನುದಾನದ ತರಲು ಯೋಗ್ಯತೆ ಇಲ್ಲ
ಸರ್ಕಾರದಿಂದ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯವಿರುವ ಅನುದಾನವನ್ನು ತರಲು ಶಾಸಕರಿಗೆ ಯೋಗ್ಯತೆ ಇಲ್ಲ. ಹಿಂದೆ ಮಂಜೂರಾದ ಯೋಜನೆಗಳ ಹೆಸರಲ್ಲಿ, ಹಣದಲ್ಲಿ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಇದರಲ್ಲಿ ಮಜಾ ಮಾಡುತ್ತಿದ್ದಾರೆ. ಇಲ್ಲಿ ದೊಡ್ಡ ಕಾಮಗಾರಿಗಳ ನಿರ್ವಹಣೆ ಎಲ್ಲಿ ಆಗಿದೆ?. ಬೃಹತ್ ಯೋಜನೆಗಳ ಜಾರಿ, ಹಣದ ಬಳಕೆ ಎಲ್ಲವೂ ನಮ್ಮ ಕಾಲದಲ್ಲಿ ಆಗಿದೆ. ಈಗ ಅಭಿವೃದ್ಧಿ ಶೂನ್ಯವಾಗಿದೆ. ಕೇವಲ ಮಾತುಗಳಲ್ಲಿ ಕಾಲಕಾರಣದ ಕೆಲಸವಾಗುತ್ತಿದೆ ಎಂದು ಸಂಸದರು ವ್ಯಂಗ್ಯವಾಡಿದ್ದಾರೆ.