

ಚಿಕ್ಕಬಳ್ಳಾಪುರ: ಜಿಲ್ಲೆಯ ಅಭಿವೃದ್ಧಿಯ ವಿಚಾರದಲ್ಲಿ ಪರಸ್ಪರ ಟೀಕೆಗಳಲ್ಲಿ ತೊಡಗಿರುವ ಸುಧಾಕರದ್ವಯರು ಮತ್ತೆ ಸವಾಲಿನಲ್ಲಿ ವಾಗ್ವಾದ ನಡೆಸುತ್ತಿದ್ದು ನೇರ ಸಂಘರ್ಷದ ಮಾತುಗಳು ಕೇಳಿ ಬರುತ್ತಿವೆ.
ರಾಜ್ಯ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಸಭೆಗಳನ್ನು ಬಿರುಸುಗೊಳಿಸಿದ್ದರೆ, ಕೇಂದ್ರ ಸರ್ಕಾರದ ಹಂತದಲ್ಲಿ ಸಂಸದ ಡಾ ಕೆ.ಸುಧಾಕರ್ ದೊಡ್ಡ ಯೋಜನೆಗಳ ಮಂಜೂರಾತಿಗೆ ಸಚಿವರ ಗಮನ ಸೆಳೆಯುತ್ತಿದ್ದಾರೆ. ಇದೇ ವೇಳೆ ಜನಪರ ಕೆಲಸಗಳನ್ನು ಮುಂದಿಟ್ಟುಕೊಂಡು ಟೀಕಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಹತ್ತಿರದಲ್ಲಿಯೇ ಜಿಲ್ಲೆಯ ಜನರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಪೂಜೆ ಮಾಡುತ್ತಾರೆ, ಅವರ ಕುಟುಂಬ, ಅವರದ್ದು ರಾಜಕೀಯ ಎಂತಹುದು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಸಂಸದ ಹೇಳಿದರೆ, ನಾವು ಸುಮ್ಮನೆ ಕೂರಲ್ಲ, ಸಂಘರ್ಷಕ್ಕೂ ರೆಡಿ ಎಂಬುದಾಗಿ ಸಚಿವರು ಹೇಳುತ್ತಿದ್ದಾರೆ. ಇದರ ನಡುವೆ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ನಡೆಸಿರುವ ಪರಸ್ಪರ ಆರೋಪಗಳು ಹೆಚ್ಚಿಗೆ ಕೇಳಿ ಬರುತ್ತಿದೆ.
* ಬಾಕಿ ಕೆಲಸಗಳ ಸಮರ
ಸಂಸದರು ಡಾ ಕೆ.ಸುಧಾಕರ್ ಹಿಂದಿನ ಅವಧಿಯಲ್ಲಿ ಕೈಗೊಂಡ ಬಾಕಿ ಕೆಲಸಗಳ ಪೂರ್ಣಗೊಳಿಸುವ ವಿಚಾರವಾಗಿ ಪರಸ್ಪರ ವಾಕ್ಸಮರ ನಡೆಯುತ್ತಲೇ ಇದೆ. ಮುಖ್ಯಮಂತ್ರಿಯಾಗಿದ್ದಾಗ ಬಸವರಾಜ ಬೊಮ್ಮಾಯಿ ಘೋಷಿಸಿದ್ದ ಚಿಮುಲ್ ಪ್ರತ್ಯೇಕತೆಯ ಆದೇಶವನ್ನು ಸ್ಥಳಿಯ ಕಾಂಗ್ರೆಸ್ ನಾಯಕರ ಒತ್ತಡದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಹಿಂಪಡೆದಿದೆ. ವೈಜ್ಞಾನಿಕವಾಗಿ ವಿಭಜನೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ. ಮತ್ತೊಂದೆಡೆ ನಂದಿ ಸರ್ಕಾರಿ ವೈದ್ಯಕಿಯ ಕಾಲೇಜಿನಲ್ಲಿ ಚಿಕಿತ್ಸಾ ಪ್ರಕ್ರಿಯೆ ಪ್ರಾರಂಭ, ಅಂತಾರಾಷ್ಟ್ರೀಯ ಹೂವಿನ ಮಾರುಕಟ್ಟೆ ಸ್ಥಾಪನೆ ಸೇರಿದಂತೆ ಬಾಕಿ ಉಳಿದಿರುವ ನಾನಾ ಅಭಿವೃದ್ಧಿ ಕೆಲಸಗಳನ್ನು ಪ್ರಸ್ತಾಪಿಸಿ, ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಲಾಗುತ್ತಿದೆ. ಮತ್ತೊಂದೆಡೆ ಯೋಜನಾ ಬದ್ಧ ರೀತಿಯಲ್ಲಿ ಪೂರ್ಣಗೊಳಿಸುವ ಮಾತುಗಳನ್ನು ಹೇಳಲಾಗುತ್ತಿದೆ.