

ಚಿಕ್ಕಬಳ್ಳಾಪುರ: ಕರ್ನಾಟಕದಲ್ಲಿ ದುರಾಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ರೈತರಿಗೆ ಸರಿಯಾಗಿ ರಸಗೊಬ್ಬರ ಪೂರೈಸಿಲ್ಲ. ಇದಕ್ಕೆ ಕಾಳಸಂತೆಯಲ್ಲಿರುವ ಹಾಗೂ ದಾಸ್ತಾನಿರುವ ರಸಗೊಬ್ಬರವನ್ನು ರೈತರಿಗೆ ಸಮರ್ಪಕವಾಗಿ ತಲುಪಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಲು ಸಂಸದ ಡಾ.ಕೆ.ಸುಧಾಕರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. .
ಲೋಕಸಭೆಯ ಅಧಿವೇಶನದಲ್ಲಿನ ಶೂನ್ಯ ವೇಳೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಅವರು, ಮುಂಗಾರು ಖಾರಿಫ್ ಋತುಮಾನವು ಕೃಷಿಗೆ ನಿರ್ಣಾಯಕ ಅವಧಿಯಾಗಿದೆ. ಈ ಸಮಯದಲ್ಲಿ ರೈತರು ಭತ್ತ, ಜೋಳ, ನೆಲಗಡಲೆ, ಸೋಯಾಬೀನ್, ದ್ವಿದಳ ಧಾನ್ಯಗಳನ್ನು ಬೆಳೆಯುತ್ತಿದ್ದು ಈಗ ದುರದೃಷ್ಟವಶಾತ್ ಜಾಗತಿಕ ಮಟ್ಟದಲ್ಲಿ ದೇಶ ದೇಶಗಳ ನಡುವೆ ಸಂಘರ್ಷ ನಡೆಯುತ್ತಿದೆ. ಆದರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು *8.13 ಲಕ್ಷ ಟನ್‌ಗಳಷ್ಟು* ಯೂರಿಯಾವನ್ನು ಕರ್ನಾಟಕ ರಾಜ್ಯಕ್ಕೆ ಕಳುಹಿಸಿಕೊಟ್ಟಿದೆ. ಆದರೆ, ಭ್ರಷ್ಟಾಚಾರದಲ್ಲಿ ಮುಳುಗಿ ಸೊರಗಿ ಹೋಗಿರುವ, ದುರಾಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಅಸಮರ್ಪಕ ಆಡಳಿತದಿಂದಾಗಿ ದಾಸ್ತಾನಿರುವ ರಸಗೊಬ್ಬರ ಸರಿಯಾಗಿ ಹಂಚಿಕೆಯಾಗಿಲ್ಲ. ರೈತರಿಗೆ ಅನ್ಯಾಯವಾಗಿದೆ ಎಂದು ದೂರಿದರು.
ಕರ್ನಾಟಕದಲ್ಲಿ 258 ರೂ. ಗೆ ಸಬ್ಸಿಡಿ ದರದಲ್ಲಿ ಯೂರಿಯಾ ಸಿಗಬೇಕಿದ್ದರೂ ಕಾಳಸಂತೆಯಲ್ಲಿ 500 ರೂ, ಹಾಗೆಯೇ 1,200 ರೂಗೆ ಸಿಗಬೇಕಿದ್ದ ಡಿಎಪಿ 2,000 ರೂಗಳಿಗೆ ಮಾರಾಟವಾಗುತ್ತದೆ. ಈಗಾಗಲೇ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿಯವರ ನೇತೃತ್ವದಲ್ಲಿ ಸಂಸದರು ಹಾಗೂ ರಾಜ್ಯಸಭಾ ಸದಸ್ಯರ ನಿಯೋಗದೊಂದಿಗೆ ರಸಗೊಬ್ಬರ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ, ಈ ಸಮಸ್ಯೆಯ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಕಾಳಸಂತೆಯಲ್ಲಿರುವ ಹಾಗೂ ದಾಸ್ತಾನಿನಲ್ಲಿರುವ ರಸಗೊಬ್ಬರಔನ್ನು ಸೂಕ್ತ ದರದಲ್ಲಿ ಸಮರ್ಪಕವಾಗಿ ರೈತರನ್ನು ತಲುಪಿಸಬೇಕಾಗಿದೆ. ಇದಕ್ಕೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೇಂದ್ರ ಸರ್ಕಾರದಿಂದ ಕಟ್ಟುನಿಟ್ಟಿನ ಸೂಚನೆ ನೀಡಬೇಕಾಗಿದೆ ಎಂದು ಆಗ್ರಹಿಸಿದರು.