

ಚಿಕ್ಕಬಳ್ಳಾಪುರ: ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿರುವುದರ ನಡುವೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರ ವಿರುದ್ಧ ಸ್ವಪಯ ಬೆಂಬಲಿತ ಅಭ್ಯರ್ಥಿಯ ಗೆಲುವಿನ ಮೂಲಕ ತೃಪ್ತಿಪಟ್ಟುಕೊಂಡಿದೆ.
ಎ ವರ್ಗದಿಂದ ಬಿ.ಸಿ.ನಾಗೇಶ್ 11 ಮತ ಪಡೆದುಕೊಂಡು ಗೆಲುವು ಸಾಧಿಸಿದರೆ, ಸಂಸದ ಡಾ ಕೆ.ಸುಧಾಕರ್ ಅತ್ಯಾಪ್ತ ಹಾಗೂ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ ಕೇವಲ 4 ಮತಗಳನ್ನು ಪಡೆದುಕೊಂಡು ಸೋಲು ಕಂಡಿದ್ದಾರೆ.
ಚುನಾವಣೆಯಲ್ಲಿ ಸಂಸದರು ಹಾಗೂ ಕಾಂಗ್ರೆಸ್ ಶಾಸಕ ಪ್ರದಿಪ್ ಈಶ್ವರ್ ಅಯ್ಯರ್ ಬಣದ ನಡುವೆ ತೀವ್ರ ಪೈಪೋಟಿ ಉಂಟಾಗಿತ್ತು. ಇದರ ನಡುವೆ ಕಮಲ ಮೇಲುಗೈ ಸಾಧಿಸಿದರೂ ಸ್ವಪಯ ಪ್ರಭಾವಿ ಅಭ್ಯರ್ಥಿ ಸೋಲು ಸಂಸದರ ಪಾಳಯದಲ್ಲಿ ಮುಖ ಭಂಗದ ಮಾತುಗಳಿಗೆ ಎಡೆ ಮಾಡಿಕೊಟ್ಟಿದೆ.
*ಕೈ ಕೊಟ್ಟ ಸ್ವಪಕ್ಷೀಯರು
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂ(ಟಿಎಪಿಸಿಎಂಎಸ್) ಚುನಾವಣೆಯಲ್ಲಿ ಸಂಸದ ಡಾ ಕೆ.ಸುಧಾಕರ್ ತಂತ್ರಗಾರಿಕೆ ಯಶಸ್ವಿಯಾಗಿದೆ. ಆದರೆ, ಮರಳುಕುಂಟೆ ಕೃಷ್ಣಮೂರ್ತಿ ವಿಚಾರದಲ್ಲಿ ಸ್ವಪಕ್ಷೀಯರೇ ಪೆಟ್ಟು ಕೊಟ್ಟಿದ್ದಾರೆ.
ಸಂದ ಚುನಾವಣೆಗೆ ಎ ವರ್ಗದ 15 ಮತದಾರರ ಪೈಕಿ (ತಾಲೂಕು ವ್ಯಾಪ್ತಿಯಲ್ಲಿ 15 ವಿಸ್ಸೆಸ್ಸೆನ್ ಸಂಘಗಳಿಂದ ಬಂದ ತಲಾ ಒಬ್ಬರು) 14 ಮತದಾರರು ಬಹುತೇಕ ಬಿಜೆಪಿ ಅಭ್ಯರ್ಥಿಗಳಿಗೆ ಮತ ಚಲಾಯಿಸಿ ಗೆಲ್ಲಿಸಿದ್ದಾರೆ. ಆದರೆ, ಮರಳುಕುಂಟೆ ಕೃಷ್ಣಮೂರ್ತಿಗೆ ಕೇವಲ 4 ಮತಗಳು ಸಿಕ್ಕಿದ್ದು 10 ಮತದಾರರು ಕೈಕೊಟ್ಟಿರುವುದು, ಕಾಂಗ್ರೆಸ್ ಬೆಂಬಲಿತ ಬಿ.ಸಿ.ನಾಗೇಶ್ ಪರ ಒಲವು ವ್ಯಕ್ತಪಡಿಸಿರುವುದು ಫಲಿತಾಂಶದಿಂದ ತಿಳಿದು ಬಂದಿದೆ.
*ಕೋಚಿಮುಲ್ ರಾಜಕೀಯ
ಟಿಎಪಿಸಿಎಂಎಸ್ ಫಲಿತಾಂಶ ಘೋಷಣೆಯು ಕೋಚಿಮುಲ್ ಚುನಾವಣಾ ರಾಜಕೀಯ ವಿಚಾರಗಳ ಚರ್ಚೆಗೆಗ್ರಾಸವಾಗಿದೆ.
ಹಿಂದೆ ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಗೆ ಸ್ವಪಕ್ಷೀಯರು ಕೊನೆ ಕ್ಷಣದಲ್ಲಿ ಕೈ ಕೊಟ್ಟು ಸೋಲಿಸಿದ್ದರು. ಇದೇ ಸಂದರ್ಭದಲ್ಲಿ ಮರಳುಕುಂಟೆ ಕೃಷ್ಣಮೂರ್ತಿ ಕೈವಾಡದ ಶಂಕೆಯ ಅಡಿಯೋ ವೈರಲ್ ಆಗಿತ್ತು. ಸಂಸದರ ಮಧ್ಯೆ ಪ್ರವೇಶದಿಂದ ಆಂತರಿಕ ಅಸಮಾಧಾನ, ಭಿನ್ನಮತ ಶಮನಗೊಂಡಿತ್ತು. ಈಗ ಗೆಲುವಿನ ಸಾಧ್ಯತೆ ನಿಚ್ಚಳವಾಗಿದ್ದರೂ ಕೃಷ್ಣಮೂರ್ತಿ ಸೋಲು ಉಣ್ಣುವಂತಾಗಿದೆ. ಇದಕ್ಕೆ ಒಳೇಟು ಕಾರಣ ಎಂತಲೇ ಹೇಳಲಾಗುತ್ತಿದೆ.