

ಶಿರಹಟ್ಟಿ: ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಭಾನುವಾರ ಕುಟುಂಬ ಸಮೇತ ಇಲ್ಲಿನ ಫಕೀರೇಶ್ವರ ಮಠಕ್ಕೆ ಭೇಟಿ ನೀಡಿ ಪೀಠಾಧಿಪತಿ ಶ್ರೀ ಜ. ಫಕೀರಸಿದ್ಧರಾಮ ಸ್ವಾಮೀಜಿ ಹಾಗೂ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀಗಳ ಆಶೀರ್ವಾದ ಪಡೆದರು. ಇದೇ ವೇಳೆ ಶ್ರೀ ಮಠದಿಂದ ಉಭಯ ಶ್ರೀಗಳು ಜಗದೀಶ ಶೆಟ್ಟರ್, ಪತ್ನಿ ಶಿಲ್ಪಾ ಶೆಟ್ಟರ್ ಅವರನ್ನು ಸನ್ಮಾನಿಸಿ, ಗೌರವಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್, ತಾವು ಮಠದ ಪರಮ ಭಕ್ತರಾಗಿದ್ದು, ಹೀಗಾಗಿ ಫಕೀರೇಶ್ವರರ ಆಶೀರ್ವಾದ ಪಡೆಯಲು ಬಂದಿದ್ದೇವೆ. ಬೆಳಗಾವಿ ಕ್ಷೇತ್ರದ ಜನತೆಯ ಪ್ರೀತಿ, ವಿಶ್ವಾಸದಿಂದ 1.80 ಲಕ್ಷ ಮತಗಳ ಅಂತರದಿಂದ ಗೆಲುವು ನೀಡಿದ್ದಾರೆ. ಜನತೆಯ ಸೇವೆ ಮಾಡುವ ಅವಕಾಶ ದೊರೆತಿದೆ. ಬೆಳಗಾವಿ ಕ್ಷೇತ್ರದ ಜನತೆ ನನ್ನ ಮೇಲಿಟ್ಟ ನಿರೀಕ್ಷೆಗೆ ಚ್ಯುತಿ ಬರದಂತೆ ಅಭಿವೃದ್ಧಿ ಕಾರ್ಯಗಳ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಅಧಿಕಾರದ ಲಾಲಸೆಗಾಗಿ ಪಂಚ ಗ್ಯಾರಂಟಿಗಳ ಜಾರಿ ಮಾಡಿದ್ದರಿಂದ ಸರ್ಕಾರದ ಖಜಾನೆ ಖಾಲಿ ಆಗಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷದ ಶಾಸಕರೇ ಆಡಿಕೊಳ್ಳುತ್ತಿದ್ದಾರೆ. ಪಂಚ ಗ್ಯಾರಂಟಿಗಳಿಗೆ ಹಣ ಸಂಗ್ರಹಿಸಲು ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿ ಜನರ ಮೇಲೆ ಬರ ಹಾಕಿದೆ ಎಂದು ಟೀಕಿಸಿದರು.
ಕೇಂದ್ರ ಸಚಿವ ಸ್ಥಾನ ಲಭಿಸದ್ದಕ್ಕೆ ಅಸಮಾಧಾನವಾಗಿದೆಯಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ತತ್ವ ಸಿದ್ಧಾಂತ ಹಾಗೂ ಶಿಸ್ತಿನ ಪಕ್ಷ. ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದಷ್ಟೇ ಹೇಳಿದರು.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ತಪ್ಪಿದ್ದಕ್ಕೆ ಕಾಂಗ್ರೆಸ್ ಸೇರಿ, ಕೊನೆಗೆ ಮಾತೃ ಪಕ್ಷಕ್ಕೆ ಮರಳಿದ್ದು ಸರಿಯೇ?. ನೀವು ಮಾನಸಿಕವಾಗಿ ಕಾಂಗ್ರೆಸ್ ಪಕ್ಷ ಸೇರಿರಲಿಲ್ಲವೇ? ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ್, ನಾನು ಅನಿವಾರ್ಯವಾಗಿ ಕಾಂಗ್ರೆಸ್ ಸೇರಬೇಕಾಯಿತು. ಮತ್ತೆ ಬಿಜೆಪಿ ಸೇರಿ ಸಂಸದನಾಗಿ ಆಯ್ಕೆಯಾಗಿದ್ದರಿಂದ ನನ್ನ ಶಕ್ತಿ ಎಂಥದ್ದು ಅಂತಾ ಗೊತ್ತಾಗಿದೆ ಎಂದು ವಿರೋಧಿಗಳಿಗೆ ಬಾಣ ಬೀಸಿದರು.
ಶಿರಹಟ್ಟಿ ಮಠದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳಿಂದ ಸಂತುಷ್ಟನಾಗಿದ್ದೇನೆ. ಕೋಮುಸೌಹಾರ್ದದಲ್ಲಿ ದೇಶಕ್ಕೆ ಮಾದರಿಯಾಗಿರುವ ಫಕೀರೇಶ್ವರ ಮಠ ಇನ್ನೂ ಎತ್ತರಕ್ಕೆ ಬೆಳೆಯಲಿ. ಅದಕ್ಕೆ ನಮ್ಮ ಸಹಾಯ, ಸಹಕಾರ ನಿರಂತರವಾಗಿದೆ ಎಂದರು.