

ಕೊಪ್ಪಳ: ನವಲು ಗರಿ ಬಳಸುವ ಮೌಲ್ವಿಗಳ ಮೇಲೆ ಕ್ರಮವಾಗಬೇಕೆಂದು ಅರವಿಂದ ಬೆಲ್ಲದ್ ಹೇಳಿಕೆ ಸತ್ಯ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲಿ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಸುದ್ದಿಗಾರನ್ನುದ್ದೇಶಿಸಿ ಶುಕ್ರವಾರ ಮಾತನಾಡಿದರು.
ಕಾನೂನು ಎಲ್ಲರಿಗೂ ಒಂದೇ. ತಪ್ಪು ಮಾಡಿದ ಎಲ್ಲರಿಗೂ ಶಿಕ್ಷೆಯಾಗಬೇಕು. ಒಬ್ಬರಿಗೆ ಒಂದು, ಮತ್ತೊಬ್ಬರಿಗೆ ಒಂದು ಮಾಡುವಂತಿಲ್ಲ. ಕಾನೂನು ಉಲ್ಲಂಘಿಸಿದ ಎಲ್ಲರ ಮೇಲೆ ಕ್ರಮವಾಗಲಿ. ನವಿಲು ಗರಿ ಬಳಸುವವರ ಮೇಲೂ ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು.
ಎರಡು ವರ್ಷ ಬಳಿಕ ಸಿಎಂ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿ, ಇದು ಕಾಂಗ್ರೆಸ್ ಪಕ್ಷದ ವಿಚಾರ. ಅವರ ಪಕ್ಷದವರು ಮಾತನಾಡುವುದು ನಿಜ ಇರಬಹುದು ಎಂದರು.
ಶಾಸಕ ದೊಡ್ಡನಗೌಡ ಪಾಟೀಲ್ ಮಾತನಾಡಿ, ನವಿಲು ಗರಿ, ಮಸೀದಿ, ಗುಡಿ ಎಲ್ಲಾದರೂ ಇರಲಿ. ವಶಕ್ಕೆ ಪಡೆಯಲಿ. ವನ್ಯ ಜೀವಿಗಳ ಅವಶೇಷಗಳನ್ನು ಹೊಂದಿದವರ ಪ್ರಕರಣ ಮುಚ್ಚಿ ಹಾಕಲು ಸರ್ಕಾರ ಯತ್ನಿಸುತ್ತಿದೆ. ಗಣ್ಯರು, ಸಿನಿ ತಾರೆಯರು ಯಾರೇ ಆದರೂ ಕಠಿಣ ಕ್ರಮ ಕೈಗೊಳ್ಳಿ. ಕೇವಲ ರೈತರ ಮೇಲೆ ಪ್ರತಾಪ ತೋರಿಸುವುದು ಬೇಡ ಎಂದರು.
ರಾಜ್ಯ ಸರ್ಕಾರ ಸತ್ತಿದೆ. ರೈತರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದೆ. ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ಬರ ಇದ್ದರೂ ಪರಿಹಾರ ನೀಡುತ್ತಿಲ್ಲ. ಸಚಿವರು ಬರ ಪ್ರದೇಶಕ್ಕೆ ಭೇಟಿ ನೀಡುತ್ತಿಲ್ಲ. ಕೇಂದ್ರಕ್ಕೆ 1700 ಕೋಟಿ ರೂ. ಬರ ಪರಿಹಾರ ಪ್ರಸ್ತಾವನೆ ಸಲ್ಲಿಸಿದೆ.
ಅನುದಾನ ಇಲ್ಲದೆ ಕಾಮಗಾರಿಗಳು ನಡೆಯುತ್ತಿಲ್ಲ. ಈ ಮೊದಲು ಬಿಜೆಪಿಯವರು ಕಾಂಗ್ರೆಸ್‌ಗೆ ಬರುತ್ತಾರೆ ಎನ್ನುತ್ತಿದ್ದರು. ಈಗ ಬಿಜೆಪಿಯರವು ಕಾಂಗ್ರೆಸ್ಸಿಗರನ್ನು ಕರೆದೊಯ್ಯುತ್ತಿದ್ದಾರೆ ಎನ್ನುತ್ತಿದ್ದಾರೆ. ಇದರಲ್ಲಿ ಹುರುಳಿಲ್ಲವೆಂದು ಸಮಜಾಯಿಷಿ ನೀಡಿದರು.