ಅತ್ಯುತ್ತಮ ಶಿಕ್ಷಣಕ್ಕಾಗಿ ಇರಲಿ ಶಾಲೆಗಳ ನಡುವೆ ಪೈಪೋಟಿ

23 HNL
Published on

ಹೊನ್ನಾಳಿ: ಮಕ್ಕಳಿಗೆ ಶಿಸ್ತು, ಸಂಯಮ, ಪಾಠಪ್ರವಚನ ಹೇಳಿಕೊಡುವಲ್ಲಿ ಖಾಸಗಿ ಹಾಗೂ ಸರ್ಕಾರಿ ಶಾಲೆಗಳು ಪೈಪೋಟಿಗೆ ಬಿದ್ದಿವೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ರಾಜ್ಯಾಧ್ಯಕ್ಷರ ಪದಗ್ರಹಣ ಹಾಗೂ ಶಾಲಾ ಮುಖ್ಯ ಶಿಕ್ಷಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಲಾಭದ ಕಡೆ ಗಮನ ಕೊಡದೆ ಮಕ್ಕಳ ಉಜ್ವಲ ಭವಿಷ್ಯಕ್ಕೆ ಶ್ರಮಿಸುತ್ತವೆ. ಹಾಗಾಗಿ ಖಾಸಗಿ ಶಾಲೆಗಳು ಎಸ್​ಎಸ್​ಎಸ್​ಎಸಿ ಹಾಗೂ ಪಿಯುಸಿಯಲ್ಲಿ ಶೇ.100 ರಷ್ಟು ಫಲಿತಾಂಶ ಲಭಿಸುತ್ತದೆ. ಇದಕ್ಕೆ ಶಿಕ್ಷಕರ ಪರಿಶ್ರಮ ತುಂಬಾ ಮಹತ್ವದಾಗಿರುತ್ತದೆ ಎಂದರು.

ಇಡೀ ವಿಶ್ವಕ್ಕೆ ಭಾರತದ ವೈದ್ಯರು, ಇಂಜಿನಿಯರ್ ಹಾಗೂ ವಿಜ್ಞಾನಿಗಳಿಗೆ ಬೇಡಿಕೆ ಹೆಚ್ಚು. ದೇಶದಲ್ಲಿ ಉನ್ನತ ವ್ಯಾಸಂಗ ಮಾಡಿ ವಿದೇಶಗಳಲ್ಲಿ ಖ್ಯಾತಿ ಹೊಂದುತ್ತಿದ್ದಾರೆ. ಇದಕ್ಕೆ ಪ್ರಾಥಮಿಕ ಹಾಗೂ ಪೌಢಶಿಕ್ಷಣದಲ್ಲಿ ಸಿಕ್ಕಿರುವ ಮೂಲ ಶಿಕ್ಷಣ ಕಾರಣ ಎಂದು ತಿಳಿಸಿದರು.

ರಾಜ್ಯಾಧ್ಯಕ್ಷ ರೇವಣಸಿದ್ದಪ್ಪ ಮಾತನಾಡಿ, ಖಾಸಗಿ ಶಾಲೆಗಳ ಶಿಕ್ಷಕರು ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಎಷ್ಟು ಮುಂದುವರೆದಿದ್ದಾರೆ ಎಂಬ ಆಲೋಚನೆಯಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಾರೆ ಎಂದು ಹೇಳಿದರು.

ಗೌರವಾಧ್ಯಕ್ಷ ರಾಜು ಕಣಗಣ್ಣಾರ್ ಮಾತನಾಡಿ, ಅವಳಿ ತಾಲೂಕಿನಲ್ಲಿ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಅಂತರ ಖಾಸಗಿ ಶಾಲೆಗಳ ಕ್ರೀಡೋತ್ಸವ ಆಯೋಜಿಸಲಾಗುವುದು. ಶಿಕ್ಷಕರಿಗೆ ಇನ್ನು ಮುಂದೆ ಪಿಎಫ್ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.

ನೂತನ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಿದ ಪುಟ್ಟಪ್ಪ ಮಾತನಾಡಿ, ಸರ್ಕಾರಿ ಸುತ್ತೋಲೆ ನೋಡಿದರೆ ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ಮಧ್ಯೆ ತಾರತಮ್ಯ ಇರುತ್ತದೆ. ಆದರೂ ಸರ್ಕಾರದ ಆದೇಶ ಪಾಲಿಸುತ್ತೇವೆ. ಸರ್ಕಾರ ತಾರತಮ್ಯ ಮಾಡುವುದನ್ನು ಕೈಬಿಡಬೇಕು. ರಾಜ್ಯದಲ್ಲಿ ಖಾಸಗಿ ಶಾಲೆಗಳ ಶಿಕ್ಷಕರ ಹಾಗೂ ಆಡಳಿತ ಮಂಡಳಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಉಪಾಧ್ಯಕ್ಷರಾದ ಎನ್.ಕೆ.ಆಂಜನೇಯ, ಕಾರ್ಯದರ್ಶಿ ವರುಣಾಚಾರಿ, ಖಜಾಂಚಿ ಯೋಗೇಶ್ವರಪ್ಪ, ನಿರ್ದೇಶಕರಾದ ಸುರೇಶ್ ಕೆ.ಲಿಂಗಾಪುರ, ಚಂದನಾ, ಭಾನುಪ್ರಕಾಶ್ ಹಾಗೂ ದೇವರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net