

ವಿಜಯಪುರ: ಮಹಾನಗರ ಜನತೆಯ ಬಹುದಿನದ ಬೇಡಿಕೆಯಾಗಿದ್ದ ವಜ್ರಹನುಮಾನ ದೇವಸ್ಥಾನ ಬಳಿಯ ರೈಲ್ವೆ ಗೇಟ್ಗೆ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದ್ದು, ತಿಂಗಳಲ್ಲೇ ಭೂಮಿ ಪೂಜೆ ನೆರವೇರಿಸುವುದಾಗಿ ಸಂಸದ ರಮೇಶ ಜಿಗಜಿಣಗಿ ಸಂತಸ ವ್ಯಕ್ತಪಡಿಸಿದರು.
ಇಲ್ಲಿನ ಇಬ್ರಾಹಿಂಪುರ- ಗಣೇಶ ನಗರದ ಕ್ರಾಸ್ ಬಳಿ ರಾಜ್ಯದ ಎನ್ಎಚ್- 50 ರ ಅಪ್ರೋಚ್ಗಳು ಮತ್ತು ಸ್ಲೀಪ್ ರಸ್ತೆಯೊಂದಿಗೆ 70 ಕೋಟಿ ರೂಪಾಯಿ ವೆಚ್ಚದ ಆರು ಲೇನ್ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಳೆದ 11 ವರ್ಷದ ಮೋದಿ ಸರ್ಕಾರದ ಆಡಳಿತದಲ್ಲಿ ದೇಶದ ಚಿತ್ರಣವೇ ಬದಲಾಗಿದೆ. ಅಂತೆಯೇ ಜಿಲ್ಲೆಯ ಚಿತ್ರಣವೂ ಸಂಪೂರ್ಣ ಬದಲಾಗಿದೆ. ಆರು ರಾಷ್ಟ್ರೀಯ ಹೆದ್ದಾರಿ, 12 ಅಂಡರ್ ಪಾಸ್, ಏಳು ರೈಲ್ವೆ ಮೇಲ್ಸೇತುವೆ, ನೂತನ ರೈಲ್ವೆ ನಿಲ್ದಾಣ, ಸೇರಿದಂತೆ 110 ಕೋಟಿ ರೂಪಾಯಿ ಅನುದಾನದಡಿ ರೈಲ್ವೆ ಕ್ಷೇತ್ರ ಅಭಿವೃದ್ಧಿಪಡಿಸಲಾಗಿದೆ.
ವಿಜಯಪುರ ನಗರದ ದಿನೇ ದಿನೇ ಬೆಳೆಯುತ್ತಿದ್ದು, ಸಂಚಾರ ದಟ್ಟಣೆ ತಪ್ಪಿಸಲು ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದೆ. ಇದೀಗ ವರ್ತುಲ ರಸ್ತೆಗೂ ಮಂಜೂರಾತಿ ಸಿಕ್ಕಿದ್ದು, 750 ಕೋಟಿ ಅನುದಾನ ನೀಡಲಾಗುತ್ತಿದೆ. ಈ ಎಲ್ಲ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ಸಿಗರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ ಎಂದರು.
ಕಾಂಗ್ರೆಸ್ 60 ವರ್ಷದ ಆಡಳಿತಾವಧಿಯಲ್ಲಿ ಮಾಡದ ಸಾಧನೆ ಬಿಜೆಪಿ ಕೇವಲ 11 ವರ್ಷದಲ್ಲಿ ಮಾಡಿ ತೋರಿಸಿದೆ. ಹೀಗಾಗಿ ಕಾಂಗ್ರೆಸ್ಸಿಗರಿಗೆ ಹೊಟ್ಟೆಯುರಿ ಎಂದ ಜಿಗಜಿಣಗಿ, ಮುಂದೆಂದೂ ಕಾಂಗ್ರೆಸ್ ಅಧಿಕಾರಕ್ಕೆ ಬರೋದೇ ಇಲ್ಲವೆಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ರಮೇಶ ಜಿಗಜಿಣಗಿ ಅವರನ್ನು ಆರ್ಒಬಿ ಸಂಸದ ಎಂದು ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿದ್ದು ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸುವುದಾಗಿಯೂ ಸಾಧ್ಯವಿದ್ದರೆ ಇಂಥ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸಿ ನೋಡೋಣ ಎಂದು ಸಚಿವ ಎಂ.ಬಿ. ಪಾಟೀಲರಿಗೆ ಪರೋಕ್ಷವಾಗಿ ಸವಾಲೆಸೆದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಸಹ ಸಂಸದ ಜಿಗಜಿಣಗಿ ಅವರ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ನಾಯಕರಿಗೆ ಸಂಕಟವನ್ನುಂಟು ಮಾಡಿದೆ ಎಂದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ; ಸಂಸದ ರಮೇಶ ಜಿಗಜಿಣಗಿ ಕೈಗೊಳ್ಳದ ಅಭಿವೃದ್ಧಿ ಕಾರ್ಯಗಳೇ ಇಲ್ಲ ಇಲ್ಲವೆಂದರು. ಪ್ರಧಾನಿ ನರೇಂದ್ರ ಮೋದಿ ಅವರು, ಭಾರತ ಮಾಲಾ, ಸಾಗರ ಮಾಲಾ, ಪರ್ವತ ಮಾಲಾ ಯೋಜನೆಗಳ ಮೂಲಕ ಭಾರತ ಮಾತೆಗೆ ಅಭಿವೃದ್ಧಿಯ ಹಾರ ಹಾಕಿದರೆ ಸಂಸದ ಜಿಗಜಿಣಗಿ ಸಹ ರೈಲ್ವೆ ಮೇಲ್ಸೇತುವೆ, ಹೆದ್ದಾರಿ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳ ಮೂಲಕ ವಿಜಯಪುರಕ್ಕೆ ಹಾರ ಹಾಕಿದ್ದಾರೆ ಎಂದರು.
ಮುಖಂಡ ರವಿ ಬಗಲಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ರೈಲ್ವೆ ಮೇಲ್ಸೇತುವೆ, ವರ್ತುಲ ರಸ್ತೆಗಳ ನಿರ್ಮಾಣ ಹಾಗೂ ಇಂಡಿ ಶಾಖಾ ಕಾಲುವೆಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ಒದಗಿಸಲು ಕ್ರಮ ಕೈಗೊಂಡಿರುವ ಸಂಸದ ರಮೇಶ ಜಿಗಜಿಣಗಿ ಅವರ ಕಾರ್ಯ ಶ್ಲಾಘನೀಯ ಎಂದರು.
ಮಾಜಿ ಶಾಸಕ ರಮೇಶ ಭೂಸನೂರ, ಮುಖಂಡರಾದ ವಿಜುಗೌಡ ಪಾಟೀಲ, ಆರ್.ಎಸ್. ಪಾಟೀಲ ಕುಚಬಾಳ, ಚಂದ್ರಶೇಖರ ಕವಟಗಿ, ಉಮೇಶ ಕೋಳಕೂರ, ಭೀಮಾಶಂಕರ ಹದನೂರ, ಈರಣ್ಣ ರಾವೂರ ಮತ್ತಿತರರಿದ್ದರು.