

ವಿಜಯಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಜಲ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಹೆಚ್ಚು ಕಡಿಮೆ ಅವ್ಯವಹಾರ ಆಗಿದ್ದು, ಈ ಕುರಿತು ಕೇಂದ್ರ ಸರ್ಕಾರಕ್ಕೆ ವರದಿ ನೀಡುವುದಾಗಿ ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.
ಕಳೆದೊಂದು ವಾರದಿಂದ ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ’ಯಲ್ಲಿ ಪ್ರಕಟಗೊಳ್ಳುತ್ತಿರುವ ‘ಹಳ್ಳ ಹಿಡಿದ ಜಲ ಜೀವನ್ ಮಿಷನ್’ ಸರಣಿ ವರದಿಯನ್ನು ಉಲ್ಲೇಖಿಸಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ರಿಕೆಯ ವರದಿಗಳನ್ನು ಗಮನಿಸಿದ್ದಲ್ಲದೇ ಸಾರ್ವಜನಿಕರಿಂದಲೂ ಸಾಕಷ್ಟು ದೂರುಗಳು ಬಂದಿವೆ. ಈ ಕುರಿತು ಕೇಂದ್ರಕ್ಕೆ ವರದಿ ನೀಡುವುದರ ಜೊತೆಗೆ ಎಲ್ಲಿ ಏನು ಮಾಡಬೇಕೋ ಅದನ್ನು ಮಾಡುವುದಾಗಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಹಳ್ಳಿ ಹಳ್ಳಿಗೂ ಶುದ್ಧ ಕುಡಿಯುವ ನೀರು ಕಲ್ಪಿಸುವ ಸದುದ್ಧೇಶದೊಂದಿಗೆ ಜಲಧಾರೆ ಹಾಗೂ ಜಲಜೀವನ್ ಮಿಷನ್ ಎಂಬ ಎರಡು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಅದರಲ್ಲೂ ವಿಶೇಷವಾಗಿ ವಿಜಯಪುರ, ಬಾಗಲಕೋಟೆ ಮತ್ತಿತರ ಜಿಲ್ಲೆಯ ಸುಮಾರು 900 ಹಳ್ಳಿಗಳಿಗೆ ಕುಡಿಯುವ ನೀರು ಕಲ್ಪಿಸಲು ಜಲಧಾರೆ ಯೋಜನೆ ಅನುಷ್ಟಾನಗೊಳಿಸಿದ್ದು, ಪ್ರಸಕ್ತ ಸಾಲಿನಲ್ಲಿ ಅನುದಾನ ಕೂಡ ಮಂಜೂರಿಸಲಾಗಿದೆ ಎಂದರು.
ಮುಂದುವರಿದ ಭಾಗವಾಗಿ ಜಲಧರೆಯಿಂದ ಜಲ ಜೀವನ್ ಮಿಷನ್ ಯೋಜನೆ ಮೂಲಕ ಮನೆ ಮನೆಗಳಿಗೆ ಶುದ್ಧ ಕುಡಿಯುವ ನೀರು ಕಲ್ಪಿಸುವ ಯೋಜನೆ ಜಾರಿಯಲ್ಲಿದ್ದು, ರಾಜ್ಯ ಸರ್ಕಾರ ಅನುಷ್ಟಾನದಲ್ಲಿ ಎಡವಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಲ ಜೀವನ್ ಮಿಷನ್ ಯೋಜನೆಯಲ್ಲಿ ಹೆಚ್ಚುಕಡಿಮೆ ಅವ್ಯವಹಾರವಾಗಿದೆ. ಇದಕ್ಕೆ ರಾಜ್ಯ ಸರ್ಕಾರವೇ ಕಾರಣ. ಕಾಮಗಾರಿಯ ಗುತ್ತಿಗೆ ಪಡೆದವರು ತಾವು ಕೆಲಸ ಮಾಡುವ ಬದಲು ಉಪ ಗುತ್ತಿಗೆದಾರರಿಗೆ ಹಣಕ್ಕೆ ಮಾರಿಕೊಳ್ಳುತ್ತಾರೆ. ತಾವು ಎಷ್ಟು ತಿನ್ನಬೇಕೋ ಅಷ್ಟು ಹಣ ತಿಂದು ಉಪ ಗುತ್ತಿಗೆದಾರರಿಗೆ ಕಾಮಗಾರಿಯ ಜವಾಬ್ದಾರಿ ವಹಿಸುವ ಕಾರಣ ಅವರು ಸರಿಯಾಗಿ ಕಾಮಗಾರಿ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಕಟ್ಟು ನಿಟ್ಟಿನ ಸೂಚನೆ ಕೂಡ ನೀಡಿದ್ದೇನೆ. ಜಿಲ್ಲಾ ಪಂಚಾಯಿತಿ ಸಿಇಒ, ಅಭಿಯಂತರ ಹಾಗೂ ಸಂಬಂಧಿಸಿದ ಶಾಸಕರುಗಳ ಗಮನಕ್ಕೂ ತಂದಿದ್ದೇನಲ್ಲದೇ, ಈ ಉಪ ಗುತ್ತಿಗೆದಾರರ ಪರವಾನಿಗೆ ರದ್ದುಗೊಳಿಸಿ ಅವರನ್ನು ಕಪ್ಪು ಪಟ್ಟಿಗೆ ಸೇರ್ಪಡೆಗೊಳಿಸುವಂತೆಯೂ ಸೂಚಿಸಿದ್ದೇನೆ. ಶೀಘ್ರದಲ್ಲಿಯೇ ಅದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಲು ಎಲ್ಲಿ ಏನು ಮಾಡಬೇಕೋ ಅದನ್ನು ಮಾಡುವೆ ಎಂದರು.
ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಪುಣ್ಯದ ಕಾರ್ಯ ಇದು. ಇಂತ ಯೋಜನೆ ಅನುಷ್ಟಾನದಲ್ಲಿ ರಾಜ್ಯ ಸರ್ಕಾರ ವಿಫಲವಾಗುತ್ತಿರುವುದಕ್ಕೆ ಖೇದವಿದೆ. ಎಲ್ಲೆಂದರಲ್ಲಿ ಸಿಸಿ ರಸ್ತೆ ಅಗೆದು ಬಿಟ್ಟಿದ್ದಾರೆ. ಗುಂಡಿ ಮುಚ್ಚಿ ಮರಳಿ ರಸ್ತೆ ಮಾಡಿಕೊಂಡಬೇಕೆಂಬ ನಿಯಮವಿದ್ದರೂ ಗಾಳಿಗೆ ತೂರಿದ್ದಾರೆ. ರಾಜ್ಯ ಸರ್ಕಾರ, ಸಂಬಂಧಿಸಿದ ಅಧಿಕಾರಿಗಳು ಹಾಗೂ ಶಾಸಕರು ಸಹ ಗಮನ ಹರಿಸಬೇಕಲ್ಲವಾ? ಅವರಿಗೂ ಜವಾಬ್ದಾರಿ ಇದೆಯಲ್ಲವೇ? ನಾನೆಲ್ಲಾದರೂ ಆಯಾ ಕ್ಷೇತ್ರಗಳಲ್ಲಿ ಹೇಳಲು ಹೋದರೆ ಶಾಸಕರು ಗರಂ ಆಗುತ್ತಾರೆ. ಆದರೆ, ಈ ಯೋಜನೆ ಅನುಷ್ಟಾನದಲ್ಲಿ ಎಲ್ಲರದ್ದೂ ಪಾತ್ರವಿದೆ. ಎಲ್ಲರೂ ಕಾಳಜಿ ತೋರಬೇಕು ಎಂದು ಜಿಗಜಿಣಗಿ ಕಳಕಳಿಯಿಂದ ನುಡಿದರು.
ಗುತ್ತಿಗೆದಾರರ ಬಿಲ್ ಬಾಕಿ ಇರಿಸುವ ಕುರಿತು, ಪ್ರಗತಿಯಲ್ಲಿರುವ ಕಳಪೆ ಕಾಮಗಾರಿ ತಡೆಹಿಡಿಯುವ ವಿಚಾರವಾಗಿಯೂ, ಪೂರ್ಣಗೊಂಡ ಹಾಗೂ ಗ್ರಾಮ ಪಂಚಾಯಿತಿಗೆ ಹಸ್ತಾಂತರಗೊಂಡ ಕಾಮಗಾರಿಗಳ ಸಮಗ್ರ ತನಿಖೆಗೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಗಜಿಣಗಿ ಅವರು, ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನವನ್ನು ಸಕಾಲಕ್ಕೆ ಬಿಡುಗಡೆಗೊಳಿಸುತ್ತದೆ. ರಾಜ್ಯ ಸರ್ಕಾರ ಮುಂದೆ ನಿಂತು ಯೋಜನೆಯನ್ನು ಜನರಿಗೆ ತಲುಪಿಸಬೇಕು. ಆದರೆ, ಇಲ್ಲಿ ರಾಜ್ಯ ಸರ್ಕಾರ ಎಡವಿದೆ. ಎಲ್ಲಿ ಏನು ಮಾಡಬೇಕೆಂಬುದು ನಮಗೆ ಗೊತ್ತಿದ್ದು, ಶೀಘ್ರದಲ್ಲಿಯೇ ಕೇಂದ್ರ ಸರ್ಕಾರದ ವರದಿ ನೀಡಿ ಮುಂದಿನ ಕ್ರಮಕ್ಕೆ ಒತ್ತಾಯಿಸುವುದಾಗಿ ಪ್ರತಿಕ್ರಿಯಿಸಿದರು.