ರಾಜಕೀಯ ಗುರುವಿನ ಋಣ ಸಂದಾಯ, ಜೆ.ಎಚ್. ಪಟೇಲ ಕಲಿತ ಶಾಲೆಗೆ ಕಾಯಕಲ್ಪ ನೀಡುವುದಾಗಿ ಸಂಸದ ರಮೇಶ ಜಿಗಜಿಣಗಿ ಭರವಸೆ

ramesh jigajinagi
Published on

ವಿಜಯಪುರ: ಕಟ್ಟಿದ ಮನೆಗೆ ಗುರುವಿನ ಹೆಸರು ಇರಿಸಿದ್ದಲ್ಲದೇ ಅವರು ಕಲಿತ ಶಾಲೆಗೂ ಕಾಯಕಲ್ಪ ನೀಡುವ ಮೂಲಕ ಸಂಸದನೋರ್ವ ಗುರುವಿನ ಋಣ ಸಂದಾಯಕ್ಕೆ ಮುಂದಾಗಿದ್ದಾರೆ !

ಮಾಜಿ ಸಿಎಂ ಜೆ.ಎಚ್. ಪಟೇಲ ಹಾಗೂ ರಾಮಕೃಷ್ಣ ಹೆಗಡೆ ನಿವಾಸ ಎಂದು ತಮ್ಮ ಮನೆಗೆ ನಾಮಕರಣ ಮಾಡಿರುವ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಇದೀಗ ಜೆ.ಎಚ್. ಪಟೇಲರು ಕಲಿತ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾರಿಗನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪುನರುಜ್ಜೀವನಗೊಳಿಸುವ ಭರವಸೆ ನೀಡಿದ್ದಾರೆ.

ಈ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಸಂಸದರು, ಮಾಜಿ ಸಿಎಂ ಜೆ.ಎಚ್. ಪಟೇಲರು ನನ್ನ ರಾಜಕೀಯ ಗುರುಗಳು. ನನ್ನ ಸುಂದರ ತೋಟದಲ್ಲಿ ನಿರ್ಮಿಸಿದ ಬೃಹತ್ ಮನೆಗೆ ರಾಮಕೃಷ್ಣ ಹೆಗಡೆ ಹಾಗೂ ಜೆ.ಎಚ್. ಪಟೇಲ ಎಂದು ನಾಮಕರಣ ಮಾಡಿದ್ದೇನೆ. ಆ ಇಬ್ಬರೂ ಮಹನೀಯರು ನನ್ನ ರಾಜಕೀಯ ಗುರು, ಮಾರ್ಗದರ್ಶಿಗಳು. ಹೀಗಾಗಿ ಅವರನ್ನು ನಿತ್ಯ ಸ್ಮರಿಸುವುದಾಗಿ ತಿಳಿಸಿದರು.

ಇಂದು ಜೆ.ಎಚ್. ಪಟೇಲರು ನಮ್ಮ ಜೊತೆಯಲ್ಲಿಲ್ಲ. ಆದರೆ ಅವರು ಕಲಿತ ಶಾಲೆ ಇನ್ನೂ ಇದೆ. ಕಾರಿಗನೂರಿನಲ್ಲಿರುವ ಸರ್ಕಾರಿ ಶಾಲೆಯಲ್ಲಿ 17 ಕೊಠಡಿಗಳಿವೆ. ಅದರಲ್ಲಿ 2 ಕೊಠಡಿಗಳು ಮಾತ್ರ ಉಳಿದಿದ್ದು, ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದೆ. ಸರ್ಕಾರ ಈ ಬಗ್ಗೆ ಕಾಳಜಿ ವಹಿಸಿಲ್ಲ. ಹೀಗಾಗಿ ಮನಸ್ಸಿಗೆ ನೋವಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಎಷ್ಟು ಸಾಧ್ಯವೋ ಅಷ್ಟು ಜವಾಬ್ದಾರಿ ತೆಗೆದುಕೊಂಡು ಯಾವುದೋ ಒಂದು ರೂಪದಲ್ಲಿ ಶಾಲೆ ಕಟ್ಟಿಸುವುದಾಗಿ ಅವರು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net