

ಇಂಡಿ: ನಾನು ಪ್ರಚಾರಪ್ರಿಯನಲ್ಲ. ಸದ್ದಿಲ್ಲದೆ ಅಭಿವೃದ್ಧಿ ಕೆಲಸ ಮಾಡಿ ಮುಗಿಸಿ ತೃಪ್ತಿಪಡುವುದು ನನ್ನ ಸ್ವಭಾವವಾಗಿದೆ. ಕಳೆದ 10 ವರ್ಷಗಳಲ್ಲಿ ವಿಜಯಪುರ ಜಿಲ್ಲೆಯ ಅಭಿವೃದ್ಧಿಗಾಗಿ 1.10 ಲಕ್ಷ ಕೋಟಿ ರೂ. ಗಳ ಅನುದಾನ ತಂದಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಪಟ್ಟಣದ ಸಿಂದಗಿ ರಸ್ತೆಯ ಧನಶೆಟ್ಟಿ ಮಂಗಲ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 984 ಕೋಟಿ ರೂ. ವೆಚ್ಚದ 548-ಬಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿ, ಇಂಡಿ ಕಾಲುವೆಯ ರಿಪೇರಿಗಾಗಿ 2700 ಕೋಟಿ ರೂ. ಅನುದಾನಕ್ಕಾಗಿ ಪ್ರಧಾನಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಇಷ್ಟರಲ್ಲಿಯೇ ಮಂಜೂರಾತಿ ಸಿಗುವ ವಿಶ್ವಾಸವಿದೆ ಎಂದರು.
ರಾಷ್ಟ್ರೀಯ ಹೆದ್ದಾರಿಗಳಿಗಾಗಿಯೇ ಕಳೆದ 10 ವರ್ಷಗಳಲ್ಲಿ 3516 ಕೋಟಿ ರೂ. ಅನುದಾನ ತಂದಿದ್ದೇನೆ. ಈಗ ಭೂಮಿಪೂಜೆ ನಡೆಸಿರುವ ಹೆದ್ದಾರಿಯನ್ನು ಮೊದಲು ಮುರುಮ ಪಟ್ಟಣದಿಂದ ಇಂಡಿ ತಾಲೂಕಿನ ಝಳಕಿ ಗ್ರಾಮಕ್ಕೆ ಕೂಡಿಸಲಾಗಿತ್ತು. ಅದನ್ನು ಸಚಿವ ನಿತಿನ್ ಗಡಕರಿ ಅವರ ಹತ್ತಿರ ಹೋಗಿ ಮುರುಮ ಪಟ್ಟಣದಿಂದ ಮಾಶ್ಯಾಳ, ಇಂಡಿ, ಅಥರ್ಗಾ, ನಾಗಠಾಣ, ವಿಜಯಪುರ ಪಟ್ಟಣಕ್ಕೆ ತಂದು ಕೂಡಿಸಲು ಮನವಿ ಮಾಡಿ ಅದನ್ನು ಪರಿವರ್ತಿಸಲಾಗಿದೆ. 984 ಕೋಟಿ ರೂ. ಅನುದಾನದ ಅಂದಾಜು 102 ಕಿ.ಮೀ. ಉದ್ದದ ಹೆದ್ದಾರಿ ಕಾಮಗಾರಿ ಶೀಘ್ರ ಪ್ರಾರಂಭಿಸಲಾಗುವದು. ಇದರಲ್ಲಿ 10 ಸೇತುವೆಗಳು ಬರಲಿದ್ದು ಎಲ್ಲ ಕಾರ್ಯಗಳನ್ನು ಬೇಗನೆ ಮುಗಿಸಲು ಸೂಚನೆ ನೀಡಲಾಗಿದೆ ಎಂದರು.
ತಾಲೂಕಿನ ಇಂಚಗೇರಿ, ನಿಂಬಾಳ ಗುಡ್ಡಗಳಲ್ಲಿ ನೀರು ಸಂಗ್ರಹಿಸಿ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವಂತೆ ಕ್ರಮ ಜರುಗಿಸಲಾಗಿದೆ. 120 ಕೋಟಿ ರೂ. ಅನುದಾನದಲ್ಲಿ 76 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿಗಾಗಿ ಜಲಧಾರೆ ಯೋಜನೆ ಮಾಡಲಾಗಿದ್ದು, ಕೆಲಸ ಭರದಿಂದ ಸಾಗಿದೆ. ಭೀಮಾ ನದಿಯ ದಂಡೆಯ ಗ್ರಾಮಗಳಿಗೂ ಕೃಷ್ಣಾ ಮೇಲ್ದಂಡೆ ಯೋಜನೆಯ ಜಲಧಾರೆ ಯೋಜನೆಯಿಂದ ಕುಡಿಯುವ ನೀರು ಒದಗಿಸಲಾಗುತ್ತದೆ. ಜನತೆ ನನಗೆ ಆಶೀರ್ವಾದ ಮಾಡುತ್ತ ಬಂದಿದ್ದು, ಅವರ ಋಣ ತೀರಿಸಲು ಕೆಲಸ ಮಾಡುತ್ತೇನೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಮಾಜಿ ಶಾಸಕ ರಮೇಶ ಭೂಸನೂರ, ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ಡಿ .ಪಾಟೀಲ, ಚಂದ್ರಶೇಖರ ಕವಟಗಿ, ಕಾಸುಗೌಡ ಬಿರಾದಾರ ಮಾತನಾಡಿ, ಇಂಡಿ ಪಟ್ಟಣದಲ್ಲಿ ನಿಂಬೆ ್ಯಾಕ್ಟರಿ ಮಾಡಬೇಕು ಮತ್ತು ಗಾಣಗಾಪೂರ-ಶಿರಾಡೋಣ ರಸ್ತೆಗೆ ಮಂಜೂರಾತಿ ನೀಡಬೇಕೆಂದು ಮನವಿ ಮಾಡಿದರು.
ಬಿಜೆಪಿ ಪ್ರಮುಖರಾದ ಶ್ರೀಪತಿಗೌಡ ಬಿರಾದಾರ, ಶಂಕರಗೌಡ ಪಾಟೀಲ, ಮಲ್ಲಿಕಾರ್ಜುನ ಕಿವಡೆ, ಸಿದ್ಧಲಿಂಗ ಹಂಜಗಿ, ಶೀಲವಂತ ಉಮರಾಣಿ, ಅಣ್ಣಪ್ಪ ಖೈನೂರ, ಸಂಜೀವ ಐಹೊಳೆ, ಬಿ.ಎಸ್. ಪಾಟೀಲ, ಶ್ರೀಶೈಲಗೌಡ ಬಿರಾದಾರ, ವಿವೇಕ ಡಬ್ಬಿ, ಉಮೇಶ ಕೋಳಕೂರ, ದೇವೇಂದ್ರ ಕುಂಬಾರ, ಅನೀಲಗೌಡ ಬಿರಾದಾರ, ಅನೀಲ ಜಮಾದಾರ, ಶರಣಗೌಡ ಬಂಡಿ, ಶ್ರೀಶೈಲಗೌಡ ಬಿರಾದಾರ, ವಿರಾಜ ಪಾಟೀಲ, ಎಸ್.ಜೆ. ವಾಲೀಕಾರ, ನಾಗುಗೌಡ ಪಾಟೀಲ (ಅಥರ್ಗಾ), ಪ್ರಕಾಶ ಹಿಟ್ನಳ್ಳಿ, ರವಿ ವಗ್ಗೆ, ರಾಘವೇಂದ್ರ ಕಾಪಸೆ, ಸಂಜು ದಶವಂತ, ಶಾಂತು ಕಂಬಾರ ಇತರರಿದ್ದರು. ದೇವೇಂದ್ರ ಕುಂಬಾರ ಸ್ವಾಗತಿಸಿದರು. ಮಲ್ಲಿಕಾರ್ಜುನ ಕಿವುಡೆ ವಂದಿಸಿದರು.