

ವಿಜಯಪುರ: ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶದ ಕುರಿತು ಲೇವಡಿ ಮಾಡಿರುವ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅವರು, ದಲಿತರ ಹಣ ನುಂಗಿ ನೀರು ಕುಡಿದಿದ್ದೇ ಕಾಂಗ್ರೆಸ್ ಸಾಧನೆ ಎಂದಿದ್ದಾರೆ.
ಕೇರಳದ ವೈಯನಾಡ್ ಉಪಚುನಾವಣೆ ಸಂದರ್ಭದಲ್ಲಿ ಎಐಸಿಸಿ ಧುರೀಣೆ ಪ್ರಿಯಾಂಕಾ ಗಾಂಧಿ ಅವರು ನಾಮಪತ್ರ ಸಲ್ಲಿಸುವಾಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರಗಡೆ ನಿಲ್ಲಿಸಿ ಅವಮಾನಿಸಿದರು. ಖರ್ಗೆ ಅವರು ಕಿಟಕಿಯಲ್ಲಿ ನಿಂತು ನಾಮಪತ್ರ ಸಲ್ಲಿಸುವುದನ್ನು ನೋಡುತ್ತಿದ್ದರು. ಇದು ಎಐಸಿಸಿ ಅಧ್ಯಕ್ಷರನ್ನು ನಡೆಸಿಕೊಳ್ಳುವ ರೀತಿಯೇ? ದಲಿತರನ್ನು ನಡೆಯಿಸಿಕೊಳ್ಳುವ ರೀತಿಯೇ ನಿಮ್ಮ ಸಾಧನೆಯೇ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ದಲಿತರ ಶ್ರೇಯೋಭಿವೃದ್ಧಿಗಾಗಿ ಇರುವ ಎಸ್‌ಇಪಿ-ಟಿಎಸ್‌ಪಿ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಿದ ದಲಿತ ವಿರೋಧಿ ಸರ್ಕಾರ ಕಾಂಗ್ರೆಸ್. ಈ ಸರ್ಕಾರ ಯಾವ ಸಾಧನೆಯನ್ನೂ ಮಾಡಿಲ್ಲ, ಕೇವಲ ಜನರಿಗೆ ಮೋಸ ಮಾಡಿದೆ, ಬೆಲೆ ಏರಿಕೆಯ ಬಿಸಿ ಅನುಭವಿಸುವಂತೆ ಮಾಡಿದೆ. ಕಾಂಗ್ರೆಸ್ ನಾಯಕರು ಈ ಎಲ್ಲ ವಾಸ್ತವ ಸಂಗತಿಯನ್ನು ಬದಿಗಿಟ್ಟು ತಮ್ಮ ಬೆನ್ನು ತಾವೇ ಚಪ್ಪರಿಸಿಕೊಳ್ಳುವ ರೀತಿಯಲ್ಲಿ ಸರ್ಕಾರದ ಸಾಧನಾ ಸಮಾವೇಶ ಸಂಘಟಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಜಿಗಜಿಣಗಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನನ್ನ ಇಡೀ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟ ಆಡಳಿತ ವ್ಯವಸ್ಥೆಯನ್ನು ನಾನು ನೋಡಿಲ್ಲ. ರಾಜ್ಯದಲ್ಲಿ ಜನರು ವೇದನೆ ಅನುಭವಿಸುತ್ತಿದ್ದಾರೆ ಹೊರತು ಸರ್ಕಾರದ ಸಾಧನೆಯಂತೂ ದೂರದ ಮಾತು. ಒಟ್ಟಾರೆ ಈ ಸರ್ಕಾರ ಜನರಿಗೆ ನಿತ್ಯ ಮೋಸ ಮಾಡುತ್ತಿದೆ, ನಿತ್ಯ ಒಂದೊಂದು ಸಮಸ್ಯೆಯ ಬರೆ ಎಳೆಯುತ್ತಿದೆ ಎಂದು ಜಿಗಜಿಣಗಿ ಪ್ರಕಟಣೆ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.