

ಶಿವಮೊಗ್ಗ: ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರು ನೂತನ ರೈಲ್ವೆ ಮಾರ್ಗ ಹಾಗೂ ತಾಳಗುಪ್ಪ-ತಡಸ-ಹುಬ್ಬಳ್ಳಿ ನೂತನ ರೈಲ್ವೆ ಲೈನ್ ಕಾಮಗಾರಿಗಳನ್ನು ನಿಗದಿತ ಅವಧಿಗಿಂತ ಮುಂಚಿತವಾಗಿ ಪೂರ್ಣಗೊಳಿಸಲು ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮನವಿ ಮಾಡಿದರು.
ನವದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾದ ಅವರು, ಶಿವಮೊಗ್ಗ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳುತ್ತಿರುವ ನಾಲ್ಕು ರೈಲ್ವೆ ಮೇಲ್ಸೇತುವೆ ಕಾಮಗಾರಿ, ಕೋಟೆಗೂರಿನಲ್ಲಿ ನಿರ್ಮಾಣವಾಗುತ್ತಿರುವ ಕೋಚಿಂಗ್ ಡಿಪೋ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆಯೂ ಚರ್ಚಿಸಿದರು.
ಕುಂಸಿ, ಹಾರನಹಳ್ಳಿ, ಅರಸಾಳು ಮತ್ತು ಬೈಂದೂರು ವಿಧಾನಸಭಾ ವ್ಯಾಪ್ತಿಯ ಬೈಂದೂರು, ಶಿರೂರು, ಬಿಜೂರು ಹಾಗೂ ಸೇನಾಪುರ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೆಚ್ಚಿನ ರೈಲುಗಳು ನಿಲುಗಡೆಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಶಿವಮೊಗ್ಗ-ಬೆಂಗಳೂರು ನಡುವೆ ಸಂಚರಿಸುವ ಹಲವು ರೈಲುಗಳ ವೇಗ ಹೆಚ್ಚಿಸುವ ಬಗ್ಗೆ ಮತ್ತು ಸಮಯ ಬದಲಾವಣೆ ಮಾಡುವಂತೆ ಮನವಿ ಮಾಡಿದರು.
ಕ್ಷೇತ್ರಕ್ಕೆ ಮಂಜೂರು ಮಾಡಿರುವ ಬಿಎಸ್‌ಎನ್‌ಎಲ್ ಮೊಬೈಲ್ ಟವರ್‌ಗಳ ಅನುಷ್ಠಾನದ ಬಗ್ಗೆ ಸಚಿವರೊಂದಿಗೆ ಚರ್ಚಿಸಿದ ರಾಘವೇಂದ್ರ, ಮಂಜೂರು ಮಾಡಿರುವ ಕೆಲವು ಸ್ಥಳಗಳು ಶರಾವತಿ ಮುಳುಗಡೆ ಪ್ರದೇಶದಲ್ಲಿ ಹಾಗೂ ಕೆಲವು ಸ್ಥಳಗಳಲ್ಲಿ ಬೇರೆ ನೆಟ್‌ವರ್ಕ್ ಸಿಗ್ನಲ್ಗಳು ಸಿಗುವುದಾಗಿ ತಿಳಿದುಬಂದಿದೆ. ಹಾಗಾಗಿ ಆ ಸ್ಥಳಗಳಿಗೆ ಮಂಜೂರಾಗಿದ್ದ ಟವರ್‌ಗಳನ್ನು ಬೇರೆ ಸ್ಥಳಗಳಲ್ಲಿ ಅಳವಡಿಸಲು ಅನುಮತಿ ನೀಡುವಂತೆ ಕೋರಿದರು. ಎಲ್ಲ ಸಮಸ್ಯೆ ಮತ್ತು ಸಲಹೆಗಳನ್ನು ಆಲಿಸಿದ ಸಚಿವರು, ಸಕಾರಾತ್ಮಕವಾಗಿ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.