ರಸ್ತೆ ಕಾಮಗಾರಿ ಪರಿಶೀಲಿಸಿದ ಸಂಸದ ರಾಘವೇಂದ್ರ

B Y Raghavendra
Published on

ರಟ್ಟಿಹಳ್ಳಿ: ರಾಷ್ಟ್ರೀಯ ಹೆದ್ದಾರಿ ರಾಣೆಬೆನ್ನೂರ-ಕೊಲ್ಲೂರವರೆಗೆ ಆಯ್ದ ಭಾಗಗಳಲ್ಲಿ ಒಟ್ಟು 170 ಕೋಟಿ ರೂ. ವೆಚ್ಚದಲ್ಲಿ 27 ಕಿ.ಮೀ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ರಟ್ಟಿಹಳ್ಳಿ ತಾಲೂಕಿನ ಮಾಸೂರು-ತಿಪ್ಪಾಯಿಕೊಪ್ಪ ಗ್ರಾಮದ ಬಳಿ ಈಗಾಗಲೇ ಸೇತುವೆ ನಿರ್ಮಾಣ ಕಾರ್ಯವೂ ಮುಕ್ತಾಯದ ಹಂತದಲ್ಲಿದೆ. ಶೀಘ್ರದಲ್ಲಿಯೇ ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಕ್ತಾಯಗೊಂಡು ರೈಲ್ವೆ ಯೋಜನೆ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಪಟ್ಟಣದಲ್ಲಿ ಪ್ರಗತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಗುರುವಾರ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಶಿವಕುಮಾರ ಉದಾಸಿ ಸೇರಿ ಅನೇಕ ಜನಪ್ರತಿನಿಧಿಗಳ ಪ್ರಯತ್ನದ ಫಲವಾಗಿ ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ. ಮಂಜೂರಾಗಿರುವ 170 ಕೋಟಿ ರೂ.ಗಳ ಅನುದಾನದಲ್ಲಿ ಒಟ್ಟು 27 ಕಿ.ಮೀ. ಆಯ್ದ ಭಾಗಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ರಟ್ಟಿಹಳ್ಳಿ ಪಟ್ಟಣದಲ್ಲಿ 2 ಕಿಮೀ, ಮಾಸೂರು ಗ್ರಾಮದಲ್ಲಿ 4.8 ಕಿಮೀ, ಹಲಗೇರಿಯಲ್ಲಿ 5.30 ಕಿಮೀ, ತಿಪ್ಪಾಯಿಕೊಪ್ಪ ಗ್ರಾಮದ ಬಳಿ ಕುಮದ್ವತಿ ನದಿಗೆ ಸೇತುವೆ ನಿರ್ಮಾಣ ಸೇರಿ ವಿವಿಧೆಡೆ ಕಾಮಗಾರಿ ಪ್ರಗತಿಯ ಹಂತದಲ್ಲಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳೊಂದಿಗೆ ರಸ್ತೆ ಕಾಮಗಾರಿ ಪರಿಶೀಲಿಸಲಾಗುತ್ತಿದೆ ಎಂದರು.

ಶಂಭಣ್ಣ ಗೂಳಪ್ಪನವರ, ಶಂಕರಗೌಡ ಚೆನ್ನಗೌಡ್ರ, ಶ್ರೀನಿವಾಸ ಭೈರಪ್ಪನವರ, ಉಜಿನೆಪ್ಪ ಕೋಡಿಹಳ್ಳಿ, ರಾಘವೇಂದ್ರ ಹರವಿಶೆಟ್ಟರ್, ರವಿಯಣ್ಣ ಹರವಿಶೆಟ್ಟರ್, ಮುರಳಿ ಬಾಜೀರಾಯರ, ವೀರನಗೌಡ ಯಡಚಿ, ಬಸಣ್ಣ ಬಾಗೋಡಿ, ಶಿವರಾಜ ಗೂಳಪ್ಪನವರ, ಸಿದ್ದಪ್ಪ ಹರಿಜನ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net