

ಅಡಕೆ ಆಮದು ವಿಚಾರವನ್ನು ವಿತ್ತ ಸಚಿವರ ಗಮನಕ್ಕೆ ತರಲಾಗಿದೆ. ಕ್ಯಾಂಪ್ಕೋ ಜತೆಗೆ ಮಾತುಕತೆ ಮಾಡಲಾಗುತ್ತಿದೆ. ಅಡಕೆ ಕೃಷಿಕರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ದ.ಕ.ಸಂಸದ ಬ್ರಿಜೇಶ್ ಚೌಟ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಡಕೆ ದರ ಸಮತೋನ, ಆಮದು, ಎಲೆ ಚುಕ್ಕಿ, ಹಳದಿ ರೋಗದ ವಿಚಾರ ಸೇರಿ ಸಮಗ್ರ ವಿಷಯದಲ್ಲಿ ಪಕ್ಷ ಯಾವತ್ತೂ ಅಡಕೆ ಬೆಳೆಗಾರರ ಪರವಿದೆ. ರೋಗ ನಿಯಂತ್ರಣದ ಬಗ್ಗೆ ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದ್ದು, ಮಾತಕತೆ ನಡೆಯುತ್ತಿದೆ. ಬೆಳೆ ವಿಮೆ ಹಣ ರೈತರಿಗೆ ಬಾರದ ಬಗ್ಗೆ ಹಾಗೂ ಬೆಳೆ ಸಮೀಕ್ಷೆಯ ಸಮಸ್ಯೆಯ ಪರಿಶೀಲಿಸಲಾಗುವುದು ಎಂದರು.
ಕರಾವಳಿಯಲ್ಲಿ ರೈಲ್ವೆ ಅಭಿವೃದ್ಧಿಗೆ ವಿಶೇಷ ಗಮನ ನೀಡಲಾಗುತ್ತಿದೆ. ಕೊಂಕಣ-ಭಾರತೀಯ ರೈಲ್ವೆ ಸಂಯೋಜನೆ ಮಾತಕತೆ ಪ್ರಾರಂಭವಾಗಿದೆ. ಇದು ಪೂರ್ಣಗೊಂಡರೆ ಕರಾವಳಿಯ ಹೆಚ್ಚಿನ ಸಮಸ್ಯೆಗಳು ಇತ್ಯರ್ಥವಾಗುತ್ತವೆ. ಶಿರಾಡಿಘಾಟ್‌ನಲ್ಲಿ ರೈಲು ಸಂಚಾರ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ಫಿಸಿಬಿಲಿಟಿ ಅಧ್ಯಯನ ನಡೆಯುತ್ತಿದೆ. ಪುತ್ತೂರು ರೈಲು ನಿಲ್ದಾಣದ ಚಾವಣಿ ವಿಸ್ತರಣೆಯಾಗದೆ ಪ್ರಯಾಣಿಕರಿಗಾಗುವ ಸಮಸ್ಯೆಯ ಬಗ್ಗೆ ಅ.20 ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ನೆಹರು ನಗರದ ಸೇತುವೆಯಲ್ಲಿ ಬಿರುಕುಬಗ್ಗೆ ತಾಂತ್ರಿಕ ಮಾಹಿತಿ ಪಡೆಯಲಾಗುವುದು ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭಾ ಅಧ್ಯಕ್ಷೆ ಲೀಲಾವತಿ, ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಪ್ರಧಾನ ಕಾರ್ಯದರ್ಶಿ ಸುನಿಲ್ ಆಳ್ವ ಸುದ್ದಿಗೋಷ್ಠಿಯಲ್ಲಿದ್ದರು.
ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಪುತ್ತೂರಿನ ಕಾರ್ಯಕರ್ತ ಕಿಶೋರ್ ಕುಮಾರ್ ಬೊಟ್ಯಾಡಿ ಗೆಲ್ಲುವ ವಿಶ್ವಾಸವಿದೆ. ರಾಜ್ಯ ಸರ್ಕಾರ ಒಂದೂವರೆ ವರ್ಷದಲ್ಲಿ ದಿಕ್ಕು ದೆಸೆಯಿಲ್ಲದಂತಾಗಿದೆ. ನೆಲದ ಸಂಸ್ಕೃತಿ ಹಾಗೂ ಸಂವಿಧಾನಕ್ಕೆ ಗೌರವ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು.
| ಬ್ರಿಜೇಶ್ ಚೌಟ
ದ.ಕ.ಸಂಸದ