

ಕೋಲಾರ: ಪಾಕಿಸ್ತಾನ ಮತ್ತು ಚೀನಾ ದೇಶದ ಗಡಿ ರಗಳೆ, ಕರೊನಾ ಆರ್ಭಟದ ನಡುವೆ ಮೋದಿ ಸರ್ಕಾರ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ ವಿರೋಧ ಪಕ್ಷಗಳಿಗೆ ಟೀಕೆ ಮಾಡಲು ಬೇರೆ ವಿಷಯವಿಲ್ಲದೆ ಮೊಸರಲ್ಲಿ ಕಲ್ಲು ಹುಡುಕುತ್ತಿವೆ ಎಂದು ಸಂಸದ ಎಸ್.ಮುನಿಸ್ವಾಮಿ ಮೂದಲಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ಸಾಧನೆ, ಕರೊನಾ ನಿಯಂತ್ರಣಕ್ಕಾಗಿ ಜಾರಿಗೆ ತಂದ ವಿಶೇಷ ಪ್ಯಾಕೇಜ್ ಹಾಗೂ ಆತ್ಮನಿರ್ಭರ ಭಾರತ ಯೋಜನೆಯಿಂದ ಆಗಿರುವ ಪ್ರಯೋಜನ ಕುರಿತು ಸಮಗ್ರ ಮಾಹಿತಿ ನೀಡಿ, ವಿರೋಧ ಪಕ್ಷಗಳು ದೇಶ ಸಂಕಷ್ಟದಲ್ಲಿದ್ದಾಗ ಸಲಹೆ, ಸಹಕಾರ ನೀಡದೆ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೆರೆಸುವುದು ಸಲ್ಲದು ಎಂದರು.
ನೆಹರು ಪ್ರಧಾನಿಯಾಗಿದ್ದ ಕಾಲದಲ್ಲೇ ಚೀನಾಗೆ ಸಾವಿರಾರು ಚದರ ಕಿಮೀ ಭೂಮಿ ಬಿಟ್ಟುಕೊಟ್ಟಿದ್ದರ ಫಲವಾಗಿ ಇಂದು ನಾವು ದೇಶ ರಕ್ಷಣೆಗಾಗಿ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ವಿರೋಧ ಪಕ್ಷಗಳಿಗೆ ಗೊತ್ತಿದ್ದರೂ ಅನಗತ್ಯ ಟೀಕೆ ಮಾಡುತ್ತಿವೆ ಎಂದು ದೂರಿದರು.
ಪ್ರಧಾನಿ, ಗೃಹಮಂತ್ರಿ ಹಾಗೂ ರಕ್ಷಣಾ ಮಂತ್ರಿಯ ದಿಟ್ಟ ನಿರ್ಧಾರದಿಂದ ಚೀನಾ ತನ್ನ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದೇ ರೀತಿ ಪಾಕ್ ಗಡಿಯಲ್ಲಿ ಭಯೋತ್ಪಾದಕರು ನಡೆಸುತ್ತಿರುವ ದುಷ್ಕೃತ್ಯ ತಡೆಯಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿದೆ ಎಂದರು.
ಲಾಕ್‌ಡೌನ್ ಘೋಷಿಸಿದ ನಂತರ ಗರೀಬ್ ಕಲ್ಯಾಣ ಯೋಜನೆಯಡಿ 1.7 ಲಕ್ಷ ಕೋಟಿ ರೂ.ವಿಶೇಷ ಪ್ಯಾಕೇಜ್ ನೀಡಲಾಗಿದೆ. 80 ಕೋಟಿ ಭಾರತೀಯರಿಗೆ ಪ್ರತಿ ತಿಂಗಳು 5ಕೆಜಿ ಅಕ್ಕಿ, ಗೋಧಿ ನೀಡಲಾಗಿದೆ. ಜನಧನ ಯೋಜನೆಗೆ ಪ್ರತಿಪಕ್ಷದವರು ಅಪಹಾಸ್ಯ ಮಾಡಿದ್ದರು. ಆದರೆ ಈ ಯೋಜನೆ ಮೂಲಕ ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ, ಅಂಗವಿಕಲರ ಖಾತೆಗೆ 32,611 ಕೋಟಿ ರೂ. ಜಮಾವಣೆ ಮಾಡಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಸಿ.ಡಿ.ರಾಮಚಂದ್ರ, ನಗರಾಧ್ಯಕ್ಷ ತಿಮ್ಮರಾಯಪ್ಪ ಇತರರು ಗೋಷ್ಠಿಯಲ್ಲಿದ್ದರು.
50 ಕೋಟಿ ಬಂಡವಾಳ ಹೂಡಿಕೆ: ಆತ್ಮನಿರ್ಭರ ಯೋಜನೆಯಡಿ ಅತಿ ಸಣ್ಣ ಕೈಗಾರಿಕೆಗಳಿಗೆ 5 ಕೋಟಿಯಿಂದ 50 ಕೋಟಿ ರೂ.ವರೆಗೆ ಬಂಡವಾಳ ಹೂಡಿಕೆಗಾಗಿ ಸಾಲ ನೀಡಲಾಗಿದೆ. ವಲಸೆ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸುವ ಜತೆಗೆ ನರೇಗಾ ಯೋಜನೆಯಡಿ ಮಾನವ ದಿನಗಳನ್ನು ಹೆಚ್ಚಿಸಿ 40,000 ಕೋಟಿ ರೂ. ಒದಗಿಸಲಾಗಿದೆ ಎಂದು ಮುನಿಸ್ವಾಮಿ ಮಾಹಿತಿ ನೀಡಿದರು.
ಜಿಲ್ಲಾ ಮಾಹಿತಿ: ಗರೀಬ್ ಕಲ್ಯಾಣ್ ಯೋಜನೆಯಡಿ ಜಿಲ್ಲೆಯ 3.14 ಲಕ್ಷ ಬಿಪಿಎಲ್ ಕುಟುಂಬದ 12.11 ಲಕ್ಷ ಸದಸ್ಯರಿಗೆ ಪಡಿತರ ವಿತರಿಸಲಾಗಿದೆ. ಆರೋಗ್ಯ ಇಲಾಖೆಗೆ ಪಿಪಿಇ ಕಿಟ್, ವೆಂಟಿಲೇಟರ್ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ. ಕರೊನಾ ಸಂದರ್ಭದಲ್ಲಿ ಪ್ರತಿ ದಿನ 10,000 ಲೀಟರ್ ಹಾಲನ್ನು ಸ್ಲಂ, ಇನ್ನಿತರ ಪ್ರದೇಶದಲ್ಲಿ ಒಟ್ಟು 2.80 ಲಕ್ಷ ಲೀಟರ್ ಹಾಲು ವಿತರಿಸಲಾಗಿದೆ. ಕರೊನಾದಿಂದ ಉದ್ಯೋಗ ಕಳೆದುಕೊಂಡ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಲು ಅಂಕಿ ಅಂಶ ಸಂಗ್ರಹಿಸಲು ಅಧಿಕಾರಿಗಳಿಗೆ ತಿಳಿಸಿದ್ದು, ಸಂತ್ರಸ್ತರಿಗೆ ವಸತಿ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮುನಿಸ್ವಾಮಿ ಭರವಸೆ ನೀಡಿದರು.