ಕಲ್ಲು ಹೊಡೆಯುವ ಮನಸ್ಥಿತಿ ಬಿಡದಿದ್ದರೆ ಬುಲ್ಡೋಜರ್ ಬರಲಿದೆ: ಪ್ರತಾಪ್ ಸಿಂಹ

Pratap Simha
Published on

ಮೈಸೂರು: ಗಣೇಶ, ಆಂಜನೇಯ ಸೇರಿದಂತೆ ಹಿಂದುಗಳ ಮೆರವಣಿಗೆ ವೇಳೆ ಕಲ್ಲು ಹೊಡೆಯುವ ಮನಸ್ಥಿತಿಯನ್ನು ಮುಸಲ್ಮಾನರು ಬಿಡಬೇಕು. ಅನ್ಯ ಧರ್ಮಿಯರನ್ನು ಸೈತಾನರಂತೆ ನೋಡುವುದನ್ನು ಬಿಡಬೇಕು. ಇಲ್ಲವಾದರೆ ಬುಲ್ಡೋಜರ್ ಕಾರ್ಯಾಚರಣೆ ಅನಿವಾರ್ಯ ಎಂದು ಸಂಸದ ಪ್ರತಾಪ್ ಸಿಂಹ ಎಚ್ಚರಿಸಿದ್ದಾರೆ.


ಹುಬ್ಬಳ್ಳಿ, ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಸೇರಿದಂತೆ ರಾಜ್ಯದ ವಿವಿಧೆಡೆ ಸಂಭವಿಸಿದ ಗಲಭೆಗಳಲ್ಲಿ ಮುಸ್ಲಿಮರ ಮನಸ್ಥಿತಿ ಹೇಗಿದೆ ಎಂದು ಗೊತ್ತಾಗಿದೆ. ಮುಸ್ಲಿಮರ ಮೆರವಣಿಗೆ ಮೇಲೆ ಹಿಂದೂಗಳು ಎಂದು ಕೂಡ ಕಲ್ಲು ತೂರಾಟ ನಡೆಸಿಲ್ಲ. ಆದರೆ ಹಿಂದೂಗಳ ಮೆರವಣಿಗೆ ಮೇಲೆ ಮುಸ್ಲಿಮರಿಂದ ಕಲ್ಲು ತೂರಾಟ ನಡೆಸಲಾಗಿದೆ. ಈ ವಿಚಾರದಲ್ಲಿ ಮುಸ್ಲಿಮರ ಮನಸ್ಥಿತಿ ಬದಲಾಗಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಮೆಕ್ಕಾ, ಮದೀನಕ್ಕೆ ಹೋದವರು ಸೈತಾನನಿಗೆ ಕಲ್ಲು ಎಸೆಯುವುದು ವಾಡಿಕೆ. ಅದು ಅವರ ಸಂಪ್ರದಾಯ. ಆದರೆ ನಮ್ಮ ಹಿಂದೂಗಳು ಮೆರವಣಿಗೆ ಮಾಡುವಾಗ ನೀವು ಅದೇ ರೀತಿ ಕಲ್ಲು ಎಸೆಯುತ್ತೀರಲ್ಲ, ಹಾಗಿದ್ದರೆ ನಾವುಗಳು ಸೈತಾನ್‌ಗಳ ಎಂದು ಪ್ರಶ್ನಿಸಿದರು. ಅಲ್ಲಾ ಬಿಟ್ಟರೆ ಬೇರೆ ಯಾವುದೇ ದೇವರು ಇಲ್ಲವೆಂದು ದಿನಕ್ಕೆ ಐದು ಬಾರಿ ಮಸೀದಿಗಳ ಮೇಲೆ ಕೂಗುವ ಮೈಕ್‌ಗಳಿಗೆ ನಮ್ಮವರು ಕಲ್ಲು ಹೊಡೆದಿಲ್ಲ. ಉರುಸ್ ಮೆರವಣಿಗೆ ವೇಳೆ ಕಲ್ಲು ತೂರಿಲ್ಲ. ಆದರೆ ಗಣೇಶ, ಆಂಜನೇಯ ಮೆರವಣಿಗೆ ವೇಳೆ ಕಲ್ಲು ಹೊಡೆಯುತ್ತಾರೆ ಎಂದು ದೂರಿದರು.


ಹರ್ಷ ಹತ್ಯೆ ಬಗ್ಗೆ ಯಾವೊಬ್ಬ ಮುಸಲ್ಮಾನನು ಪ್ರಶ್ನಿಸಲಿಲ್ಲ. ದೇಶದಲ್ಲಿರುವ ಮುಸ್ಲಿಂರನ್ನು ಮೆಕ್ಕಾ, ಮದೀನದಿಂದ ಇಲ್ಲಿಗೆ ಶಿಫ್ಟ್ ಮಾಡಿಲ್ಲ. ನಿಮ್ಮ ಡಿಎನ್‌ಎ, ರಕ್ತದಲ್ಲಿ ಹಿಂದೂ ರಕ್ತವಿದೆ. ಮೊದಲು ನಿಮ್ಮ ಮನಸ್ಥಿತಿ, ಧೋರಣೆ ಬಿಟ್ಟುಬಿಡಿ. ಇಲ್ಲವಾದರೆ ಬುಲ್ಡೋಜರ್ ದಾಳಿ ಎದುರಿಸಲು ಸಿದ್ಧರಾಗಿ ಎಂದು ಹೇಳಿದರು.


ಕ್ರಿಯೆಗೆ ಪ್ರತಿಕ್ರಿಯೆ ಇರಬೇಕು. ಸಮಾಜ ಬಾಹಿರ ಶಕ್ತಿಗಳನ್ನು ಮಟ್ಟ ಹಾಕಲು, ಬುಲ್ಡೋಜರ್ ಕಾರ್ಯಾಚರಣೆ ಅನಿವಾರ್ಯ. ಈ ಬಗ್ಗೆ ಸಿಎಂ, ಗೃಹ ಸಚಿವರು ಕಠಿಣ ಕ್ರಮ ಜರುಗಿಸುವ ವಿಶ್ವಾಸವಿದೆ. ಮುಸಲ್ಮಾನರಲ್ಲಿರುವ ಪ್ರಬುದ್ಧರು ಇನ್ನಾದರೂ ತಮ್ಮ ಸಮಾಜದಲ್ಲಿ ತಪ್ಪು ಹಾದಿ ತುಳಿಯುತ್ತಿರುವ ಮಂದಿಗೆ ಬುದ್ಧಿ ಹೇಳಲಿ ಎಂದರು.


ಸಿದ್ದು ಯಾವ ಬೆಳೆ ಬೆಳೆದು ಹಣ ಮಾಡಿದರು!
ಪ್ರಧಾನಿ ಮೋದಿ ಸರ್ಕಾರಕ್ಕೆ ಬಂದಾಗಿನಿಂದ ಅಂಬಾನಿ, ಅದಾನಿ ಆಸ್ತಿ ದುಪ್ಪಟ್ಟಾಗಿ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಂಬಾನಿ, ಅದಾನಿನ್ನು ಹುಟ್ಟಿಸಿದ್ದು ಪ್ರಧಾನಿ ಮೋದಿನಾ ? ಮೋದಿ ಬರುವ ಮೊದಲು ಅವರು ಶ್ರೀಮಂತರಾಗಿರಲಿಲ್ಲವೇ ಎಂದು ಟಾಂಗ್ ನೀಡಿದರು.


ಸಿದ್ದರಾಮಯ್ಯನವರು ಹೊಲದಲ್ಲಿ ಯಾವ ಬೆಳೆ ಬೆಳೆದು ಹಣ ಮಾಡಿದರು. ಅವರು 30-40 ವರ್ಷಗಳ ಹಿಂದೆ ಇದ್ದಂತೆ ಈಗಲೂ ಇದ್ದಾರೆಯೇ. ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಡಿಕೆಶಿ 30 ವರ್ಷಗಳ ಹಿಂದೆ ಏನಾಗಿದ್ದರು ? ಉದ್ಯಮಿಗಳ ಶ್ರೀಮಂತಿಕೆ ಬಗ್ಗೆ ಮಾತನಾಡುವ ನೀವು ರಾಜಕಾರಣಿಗಳ ಶ್ರೀಮಂತಿಕೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.


ಮಾತೆತ್ತಿದರೆ ಅಂಬಾನಿ, ಅದಾನಿ ಅನ್ನುವ ಸಿದ್ದರಾಮಯ್ಯನವರೇ ದೇಶದ ಎಷ್ಟೋ ಶ್ರೀಮಂತ ಉದ್ಯಮಿಗಳು ಹುಟ್ಟಿದ್ದು ಯಾರ ಕಾಲದಲ್ಲಿ. ಆಸ್ತಿ ಮೌಲ್ಯ ಹೆಚ್ಚಾದಂತೆ ಶ್ರೀಮಂತಿಕೆಯೂ ಹೆಚ್ಚುತ್ತದೆ. ಈ ಶ್ರೀಮಂತಿಕೆ ಹೆಚ್ಚಾಗಲು ಮೊದಿ ಕಾರಣ ಎಂದರೆ ಏನರ್ಥ ಎಂದು ಕಿಡಿಕಾರಿದರು.


ಅಗತ್ಯ ವಸ್ತುಗಳ ಬೆಲೆ ನಿರಂತರ ಏರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಭಾರತದಲ್ಲಿ ಮಾತ್ರ ಹಣದುಬ್ಬರ ಏರಿಕರಯಾಗುತ್ತಿಲ್ಲ. ಜಾಗತಿಕ ಮಟ್ಟದಲ್ಲಿ ಆಗಿರುವ ಕೆಲ ಅಹಿತಕರ ಘಟನೆಗಳಿಂದ ಹಣದುಬ್ಬರ ಏರಿಕೆಯಾಗಿದೆ. ನಮ್ಮ ನೆರೆ ಹೊರೆಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಸ್ಥಿತಿ ಉತ್ತಮವಾಗಿದೆ. ಯೂಕ್ರೇನ್, ರಷ್ಯಾ ನಡುವಿನ ಬಿಕ್ಕಟ್ಟು ಆದಷ್ಟು ಬೇಗ ಅಂತ್ಯಗೊಂಡರೆ ಪರಿಸ್ಥಿತಿ ಸುಧಾರಿಸಲಿದೆ. ಸದರಿ ಯುದ್ಧ ಭಾರತದ ಮೇಲೆ ಪರಿಣಾಮ ಬೀರಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net